ಬೆಲೆ ಏರಿಕೆ ಪ್ರಾರಂಭ ಮಾಡಿದ್ದೇ ಬಿಜೆಪಿ: ಡಿಸಿಎಂ ಡಿ.ಕೆ.ಶಿವಕುಮಾರ್*

YDL NEWS
2 Min Read

 

*ಬೆಂಗಳೂರು, ಏ.05:* “ಬೆಲೆ ಏರಿಕೆ ಪ್ರಾರಂಭ ಮಾಡಿದವರೇ ಬಿಜೆಪಿಯವರು. ರೈತರಿಗೆ ನೆರವಾಗಲು ನಾವು ಹಾಲಿನ ದರ ಏರಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

 

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.

 

ಬೆಲೆ ಏರಿಕೆ ವಿರುದ್ದ ಬಿಜೆಪಿ ಹೋರಾಟದ ಬಗ್ಗೆ ಕೇಳಿದಾಗ, “ನಾವೇನು ಈಗ ಬೆಲೆ ಏರಿಕೆ ಮಾಡಿಲ್ಲ. ಅವರು ಬೆಲೆ ಏರಿಕೆ ಮಾಡಿದ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು. ರೈತರಿಗೆ ಸಹಾಯವಾಗಲು ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ” ಎಂದು ತಿಳಿಸಿದರು.

 

*ಭದ್ರಾ ಮೇಲ್ದಂಡೆ ಅನುದಾನ ವಿಚಾರ ಕೇಂದ್ರ ಸಚಿವ ಸಂಪುಟದ ಮುಂದಿದೆ:*

 

ದೆಹಲಿ ಪ್ರವಾಸ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, “ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಬಿಡುಗಡೆ ವಿಚಾರವನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಇಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವರು ತಿಳಿಸಿದ್ದಾರೆ.ನಾವು ಭದ್ರಾ ಯೋಜನೆಗೆ ಎಷ್ಟು ಖರ್ಚು ಮಾಡಿದ್ದೇವೆ, ಕೇಂದ್ರ ಎಷ್ಟು ಕೊಡಬೇಕು ಎಂಬುದನ್ನೂ ತಿಳಿಸಿದ್ದೇವೆ. ದೆಹಲಿ ಭೇಟಿ ವೇಳೆ ಕೇಂದ್ರ ಜಲಶಕ್ತಿ ಸಚಿವರನ್ನು ನಾನು ಹಾಗೂ ಮುಖ್ಯಮಂತ್ರಿಯವರು ಭೇಟಿ ಮಾಡಿ ರಾಜ್ಯದ ನೀರಾವರಿ ಸಂಬಂಧಿತ ವಿಚಾರಗಳನ್ನು ಚರ್ಚೆ ಮಾಡಿದೆವು. ಮಹದಾಯಿ, ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ವಿಚಾರಗಳನ್ನು ಮನವರಿಕೆ ಮಾಡಿದ್ದೇವೆ. ನಮ್ಮ ಸಮಸ್ಯೆಗಳು ಅವರಿಗೆ ಅರ್ಥವಾಗಿದೆ. ಈ ವಿಚಾರವಾಗಿ ಒಬ್ಬೊಬ್ಬರನ್ನೇ ಕರೆಸಿ ಮಾತುಕಥೆ ನಡೆಸುವುದಾಗಿ ತಿಳಿಸಿದ್ದಾರೆ” ಎಂದರು.

 

ಎತ್ತಿನಹೊಳೆಗೆ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸುತ್ತಾರೆಯೇ ಎಂದು ಕೇಳಿದಾಗ, “ಎತ್ತಿನಹೊಳೆಗೆ ಅನುಮತಿ ನೀಡಲೇಬೇಕು. ಇದರಲ್ಲಿ ಕೊಡಿಸುವುದೇನಿದೆ? ಇದು ಅವರ ಕರ್ತವ್ಯ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಬದಲಿ ಭೂಮಿ ನೀಡಿದ್ಧೇವೆ” ಎಂದು ತಿಳಿಸಿದರು.

 

ತಮಿಳುನಾಡಿನಿಂದ ಮೇಕೆದಾಟಿಗೆ ಮೊದಲು ಒಪ್ಪಿಗೆ ಪಡೆಯಿರಿ ನಾವು ನಂತರ ಕೊಡಿಸುತ್ತೇವೆ ಎನ್ನುವ ಬಿಜೆಪಿಯವರ ಹೇಳಿಕೆಯ ಬಗ್ಗೆ ಕೇಳಿದಾಗ, “ಅವರ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ” ಎಂದು ಹೇಳಿದರು.

Share This Article