– ಅಭೂತಪೂರ್ವ ಯಶಸ್ಸು ಕಂಡ ಮೊದಲ ಆವೃತ್ತಿ ಕ್ವಾಂಟಮ್ ಸಮಾವೇಶ
– ಕ್ವಾಂಟಮ್ ಕ್ಷೇತ್ರದ ವಿಶ್ವ ಭೂಪಟದಲ್ಲಿ ಹೊಸದೊಂದು ಮೈಲುಗಲ್ಲು
– 1951 ಪ್ರತಿನಿಧಿಗಳು ಭಾಗಿ
–
*ಬೆಂಗಳೂರು ಆಗಸ್ಟ್ 01*- ವಿಶ್ವ ಕ್ವಾಂಟಮ್ ಭೂಪಟದಲ್ಲಿ ವಿಶಿಷ್ಟ ಮೈಲುಗಲ್ಲು ನೆಡುವಲ್ಲಿ “ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ – 2025” ಯಶಸ್ವಿಯಾಗಿದೆ. ಪ್ರಥಮ ಆವೃತ್ತಿಯ ಯಶಸ್ಸು ಹಾಗೂ ಪರಿಣಾಮಗಳನ್ನು ಕಂಡು, ಮುಂದಿನ ವರ್ಷಗಳಲ್ಲಿ ಈ ಸಮಾವೇಶವನ್ನು ವಾರ್ಷಿಕ ಕಾರ್ಯಕ್ರಮವಾಗಿ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು*.
*”ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ – 2025″* ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎರಡು ದಿನಗಳ ಈ ಸಮಾವೇಶಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. 1,951 ಕ್ಕೂ ಹೆಚ್ಚು ಪ್ರತಿನಿಧಿಗಳೂ ದೇಶ ಹಾಗೂ ವಿದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರು ಕ್ವಾಂಟಮ್ ಕ್ಷೇತ್ರದಲ್ಲಿರುವ ಅವಕಾಶಗಳು, ಅವುಗಳನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್ನ ಅಧ್ಯಕ್ಷರು ಸಮಾವೇಶದಲ್ಲಿ ಭಾಗಿಯಾಗುವ ಮೂಲಕ, ಕರ್ನಾಟಕ ರಾಜ್ಯ ಈ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಪಡೆದುಕೊಳ್ಳುವ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿರುವುದನ್ನು ಸಾರಿ ಹೇಳೀದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಭೂಮಿ, ಕೌಶಲ್ಯಾಭಿವೃದ್ದಿಗೆ ಅಗತ್ಯವಾಗಿರುವ ಪಠ್ಯಕ್ರಮಗಳ ಅಳವಡಿಕೆ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಾಗಿರುವುದನ್ನು ತಿಳಿಸಿದ್ದಾರೆ. ಅಲ್ಲದೇ,2035 ವೇಳೆಗೆ ಕ್ವಾಂಟಮ್ ಬೇಸ್ಡ್ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಬೇಕಾದ ಕೌಶಲ್ಯ, ಮೂಲಸೌಕರ್ಯ ಮತ್ತು ಸ್ಟಾರ್ಪ್ಗಳಿಗೆ 1 ಸಾವಿರ ಕೋಟಿ ನಿಧಿಯನ್ನು ಮೀಸಲಿರಿಸಿ ಕರ್ನಾಟಕ ಕ್ವಾಂಟಮ್ ಮಿಷಯ್ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ನಿನ್ನೆ ಸಂಜೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ರೌಂಡ್ ಟೇಬಲ್ ಸಭೆಯಲ್ಲಿ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಾಂಗ್ಲಾದೇಶ, ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜೆರ್ಮನಿ, ಇಸ್ರೇಲ್, ಇಟಲಿ, ಜಪಾನ್, ನೇಪಾಳ, ನೆದರ್ಲಾಂಡ್, ಓಮನ್, ಸೌದಿ ಅರೇಬಿಯಾ, ಸಿಂಗಾಪೂರ್, ಸ್ವಿರ್ಜರ್ಲೆಂಡ್, ಯುನೈಟೆಡ್ ಕಿಂಗ್ಡಮ್, ಅಮೇರಿಕಾ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು, ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಕ್ರಮಗಳ ಅಳವಡಿಕೆಯ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಲಾಗಿದೆ. ಹಾಗೆಯೇ, ಹಲವಾರು ದೇಶಗಳ ಪ್ರತಿನಿಧಿಗಳು ನಮ್ಮ ರಾಜ್ಯದ ಜೊತೆ ಕೈಜೋಡಿಸಲು ಹಾಗೂ ಉದ್ದಿಮೆಗಳನ್ನು ಸ್ಥಾಪಿಸಲು, ಹಲವಾರು ಸಂಸ್ಥೆಗಳು ರಾಜ್ಯದಲ್ಲಿ ಹೂಡಿಕೆಗೂ ಒಲವು ತೋರಿಸಿದ್ದಾರೆ ಎಂದರು.
ಜಾಗತಿಕ ಕ್ವಾಂಟಮ್ ಪವರ್ಹೌಸ್ ಆಗಿ ಕರ್ನಾಟಕವನ್ನು ಕೊಂಡೊಯ್ಯಲು ಹಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಯೋಜನೆಯ ಮೂಲಕ ಕ್ವಾಂಟಮ್ ಪಠ್ಯಕ್ರಮ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಮೀಸಲಾದ ಡಿಎಸ್ಟಿ ಪಿಎಚ್ಡಿ ಫೆಲೋಶಿಪ್ಗಳನ್ನು ವಿಸ್ತರಿಸಲಾಗುವುದು. ಈ ಫೆಲೋಶಿಪ್ ಗಳು ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ ಮತ್ತು ಕ್ವಾಂಟಮ್ ಸೆನ್ಸಿಂಗ್, ಕ್ವಾಂಟಮ್ ಸಾಧನಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಈ ಉತ್ಸಾಹವನ್ನು ಮುಂದುವರೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ದೇಶದ ವಿವಿಧ ರಾಜ್ಯಗಳಿಗೆ ತೆರಳಿ ನಮ್ಮ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಅಲ್ಲಿನ ಉದ್ಯಮಿಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಿದ್ದೇವೆ. ಪ್ರಥಮ ಆವೃತ್ತಿ ಸಮಾವೇಶದ ಯಶಸ್ಸನ್ನು ಕಂಡು ನಾವು ಉತ್ಸಾಹಭರಿತರಾಗಿದ್ದೇವೆ. ಈ ಸಮಾವೇಶವು ಸ್ಟಾರ್ಟ್ಅಪ್ಸ್, ಕಾರ್ಪೊರೇಟ್ಸ್, ಕೈಗಾರಿಕೆಗಳು ಮತ್ತು ಅಕಾಡೆಮಿಕ್ ಕ್ಷೇತ್ರಗಳಿಗೆ ಜಾಗತಿಕ ಕ್ವಾಂಟಮ್ ತಂತ್ರಜ್ಞಾನಗಳ ಮುಂಚೂಣಿ ನಾಯಕರೊಂದಿಗೆ ನೇರವಾಗಿ ಸಂವಾದ ನಡೆಸಿ, ತಂತ್ರಜ್ಞಾನ ವಿನಿಮಯ, ತಂತ್ರಾತ್ಮಕ ಸಹಕಾರ ಮತ್ತು ಭವಿಷ್ಯದ ದೃಷ್ಟಿಕೋಣಗಳನ್ನು ಹಂಚಿಕೊಳ್ಳಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಕ್ವಾಂಟಮ್ ಸಮಾವೇಶವನ್ನು ವಾರ್ಷಿಕವಾಗಿ ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದು ಸಚಿವ ಎನ್ ಎಸ್ ಭೋಸರಾಜು ತಿಳಿಸಿದರು.
*ಸಮಾವೇಶದ ಹೈಲೈಟ್ಸ್:*
ಕೇವಲ 500 ಪ್ರತಿನಿಧಿಗಳನ್ನು ನಿರೀಕ್ಷಿಸಿದ್ದ ಸಮಾವೇಶಕ್ಕೆ 1951 ಪ್ರತಿನಿಧಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಆಯೋಜಿಸಲಾಗಿದ್ದ 24 ಸೆಷನ್ಸ್ಗಳಲ್ಲಿ 75 ಸ್ಪೀಕರ್ಸ್ ಭಾಗವಹಿಸಿ ಕ್ವಾಂಟಮ್ ಕ್ಷೇತ್ರದ ಬೆಳವಣಿಗೆಗಳು ಹಾಗೂ ಹೊಸ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಾಂಗ್ಲಾದೇಶ, ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜೆರ್ಮನಿ, ಇಸ್ರೇಲ್, ಇಟಲಿ, ಜಪಾನ್, ನೇಪಾಳ, ನೆದರ್ಲಾಂಡ್, ಓಮನ್, ಸೌದಿ ಅರೇಬಿಯಾ, ಸಿಂಗಾಪೂರ್, ಸ್ವಿರ್ಜರ್ಲೆಂಡ್, ಯುನೈಟೆಡ್ ಕಿಂಗ್ಡಮ್, ಅಮೇರಿಕಾ ಸೇರಿದಂತೆ 19 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
*ಐಐಐಟಿ ಧಾರವಾಡ ಹಾಗೂ ರಾಯಚೂರು ಸಂಸ್ಥೆಗಳ ಜೊತೆ ಒಪ್ಪಂದ:*
ಸಮಾವೇಶದಲ್ಲಿ IIIT ಧಾರವಾಡ ಹಾಗೂ ರಾಯಚೂರು ಸಂಸ್ಥೆಗಳು ಕ್ಯೂಪೈಎಐ ಜೊತೆ Q-ವಿದ್ಯಾ 8 ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆಗಾಗಿ ಒಪ್ಪಂದ (MoU) ಸಹಿ ಮಾಡಲಾಯಿತು. ಈ ಯೋಜನೆಯು ಟ್ರೇನ್-ದಿ-ಟ್ರೈನರ್ಸ್ ಕಾರ್ಯಕ್ರಮಗಳನ್ನು ಆರಂಭಿಸಿ, ಕ್ವಾಂಟಮ್ ಸಂಶೋಧಕರನ್ನು ಶಕ್ತಿಪಡಿಸಿ, ಕ್ವಾಂಟಮ್ ತಂತ್ರಜ್ಞಾನಗಳ ಸಾಮರ್ಥ್ಯ ವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿದೆ.