ಮುಂದಿನ ಪೀಳಿಗೆಯ ಹಿತದೊಂದಿಗೆ ರಾಜೀ ಇಲ್ಲದೆ ಪ್ರಗತಿಗೆ ಒತ್ತು: ಈಶ್ವರ ಖಂಡ್ರೆ

YDL NEWS
2 Min Read

ಬೆಂಗಳೂರು, ಆ.12: ಮುಂದಿನ ಪೀಳಿಗೆಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳದೆ, ಇಂದಿನ ದಿನಮಾನದ ಅಗತ್ಯಗಳನ್ನು ಪೂರೈಸಲು ಸುಸ್ಥಿರ ಅಭಿವೃದ್ಧಿ ಮಾಡುವುದು ರಾಜ್ಯ ಸರ್ಕಾರದ ಧ್ಯೇಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಆಧುನೀಕರಣ, ಅಭಿವೃದ್ಧಿ, ರಾಷ್ಟ್ರದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡುವಾಗ ಪರಿಸರ ಸಂರಕ್ಷಣೆ, ಸಂಪನ್ಮೂಲ ಸಂರಕ್ಷಣೆ, ಇಂಧನ ಉಳಿತಾಯ ಹಾಗೂ ಮರುಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವ ಬಗ್ಗೆಯೂ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಪ್ರಕೃತಿ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಹಸಿರು ಹೊದಿಕೆಯ ಹೆಚ್ಚಳವೊಂದೇ ನಮ್ಮ ಮುಂದಿರುವ ಪರಿಹಾರ ಎಂದರು.

ಬೆಂಗಳೂರು ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಬ್ಬ ವ್ಯಕ್ತಿ ನೆಮ್ಮದಿಯಿಂದ ಬದುಕಲು 7 ಮರ ಇರಬೇಕು ಆದರೆ ಬೆಂಗಳೂರಿನಲ್ಲಿ 7 ಜನರಿಗೆ ಒಂದು ಮರವಿಲ್ಲದ ಸ್ಥಿತಿ ಇದೆ. ರಾಜಧಾನಿಯ ಜನಸಂಖ್ಯೆ 1.50 ಕೋಟಿ ಸಮೀಪಿಸುತ್ತಿದೆ. ಇದು ಕೂಡ ದೆಹಲಿಯ ರೀತಿ ಗ್ಯಾಸ್ ಛೇಂಬರ್ ಆಗದಂತೆ ಮಾಡಲು ಸಾಂಸ್ಥಿಕ ಸಂಸ್ಥೆಗಳು ಕೈಜೋಡಿಸಿ, ನಗರದ ಹಸಿರು ಹೊದಿಕೆ ಹೆಚ್ಚಿಸಬೇಕೆಂದರು.

ಲಾಲ್ ಬಾಗ್, ಕಬ್ಬನ್ ಪಾರ್ಕ್ ನಿರ್ಮಾಣವಾಗಿ ಶತಮಾನಗಳು ಕಳೆದಿವೆ. 150 ವರ್ಷಗಳೇ ಆಗಿದ್ದರೂ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನವಾಗಿರಲಿಲ್ಲ. ಈಗ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜೈವಿಕ ಉದ್ಯಾನ ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಇದರ ಸಾಕಾರಕ್ಕೆ ಸಾಂಸ್ಥಿಕ ಸಂಸ್ಥೆಗಳು ಸಹಯೋಗ ನೀಡಬೇಕು ಎಂದರು.

ಎಚ್.ಎಂ.ಟಿ.ಗೆ ಉದ್ದಿಮೆ ಸ್ಥಾಪಿಸಲು 1960ರ ದಶಕದಲ್ಲಿ ಜಮೀನು ನೀಡಲಾಗಿತ್ತು. ಈಗ ಕೈಗಾರಿಕೆ ಮುಚ್ಚಿ ಹೋಗಿದೆ. ಎಚ್.ಎಂ.ಟಿ. ವಶದಲ್ಲಿರುವ ಭೂಮಿ ಅನ್ಯ ಉದ್ದೇಶಕ್ಕೆ ಪರಿವರ್ತನೆ ಆಗದ ಕಾರಣ ಅದು ಇಂದಿಗೂ ಅರಣ್ಯವಾಗೇ ಉಳಿದಿದೆ. ಇದನ್ನು ಮರಳಿ ವಶಕ್ಕೆ ಪಡೆದು ಮತ್ತೊಂದು ಬೃಹತ್ ಉದ್ಯಾನ ಸ್ಥಾಪಿಸಲು ಸಂಕಲ್ಪಿಸಿದ್ದು, ಇದಕ್ಕಾಗಿ ಕಾನೂನು ಹೋರಾಟ ಮಾಡಲಾಗುತ್ತಿದೆ ಎಂದರು.

ರಾಜ್ಯದ ಪ್ರಗತಿ ಮತ್ತು ಅರಣ್ಯ, ಪರಿಸರ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಆರ್ಥಿಕ ಪ್ರಗತಿ ಮತ್ತು ಪ್ರಕೃತಿ ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನವಾಗಿ ತೆಗೆದುಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ಆನೆಯಿಂದ ಭೀತಿ, ಆನೆಯಿಂದ ಖ್ಯಾತ ಎರಡೂ ಇದೆ:

ಇಂದು ವಿಶ್ವ ಆನೆಯ ದಿನ. ಎಲ್ಲರಿಗೂ ಆನೆ ದಿನದ ಶುಭಾಶಯಗಳು ಎಂದ ಸಚಿವರು ಕರ್ನಾಟಕಕ್ಕೂ ಆನೆಗೂ ಅವಿನಾಭಾವ ಸಂಬಂಧವಿದೆ. ಜಂಬೂಸವಾರಿಯಿಂದ ಕರ್ನಾಟಕಕ್ಕೆ ಖ್ಯಾತಿ ಬಂದಿದೆ. ಈ ಆನೆಗಳಿಂದ ರಾಜ್ಯಕ್ಕೆ ಖ್ಯಾತಿಯೂ ಇದೆ. ಆನೆಗಳಿಂದ ಭೀತಿಯೂ ಇದೆ ಎಂದರು.

ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮಾತನಾಡಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಸಾಂಸ್ಥಿಕ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಮತ್ತು ಸಿಇಆರ್ ನಿಧಿಯನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಹೇಳಿದರು.

ಖ್ಯಾತ ಕ್ರಿಕೆಟ್ ಪಟು ಮತ್ತು ಅರಣ್ಯ ಹಾಗೂ ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ, ಲೇಖಕಿ ರೋಹಿಣಿ ನಿಲೇಕಣಿ, ಗಾಯಕ ರಿಕಿ ಕೇಜ್ ಮತ್ತಿತರರು ಪಾಲ್ಗೊಂಡಿದ್ದರು.

Share This Article