*ಗುರುಮಿಟಕಲ್ : 5 ದಿನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ : ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ ಉಮೇಶ್ ಕೆ ಮುದ್ನಾಳ ಎಚ್ಚರಿಕೆ.

Ravikumar Badiger
2 Min Read

 

ಯಾದಗಿರಿ, ಜು.27- ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಗಣಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಜೀವಬಲಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಲೆಯ ಮಕ್ಕಳಿಗೆ ಭೂತ ಬಂಗಲೆಯಂತೆ ಕಂಡುಬರುತ್ತಿದ್ದು ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ.

ಈ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾತನಾಡಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಹಣೆ ಪಟ್ಟಿ ಹೊತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ಗಣಪೂರ ಗ್ರಾಮದ ಶಾಲೆಯ ಪರಿಸ್ಥಿತಿ ನೋಡಿದರೆ ಭಯಗ್ರಸ್ತ ಪರಿಸ್ಥಿತಿಯ ಕಾರಣ ಮಕ್ಕಳು ಶಾಲೆಗೆ ಬರುತ್ತಿಲ್ಲ.

ಎಂದು ಅವರು ದೂರಿದರು. ಶಾಲೆಯ ಹಿಂದೆ ಬೃಹತ್ ತಗ್ಗು ಗುಂಡಿಯಲ್ಲಿ ಸಂಗ್ರಹವಾದ ಮಲೀನ ನೀರು ಗಬ್ಬೆದ್ದು ನಾರುತ್ತಿದ್ದು ಹಂದಿಗಳ ಆವಾಸ ತಾಣವಾಗಿ ಪರಿಣಮಿಸಿದೆ.

ಇದರಿಂದ ಸಾಂಕ್ರಾಮಿಕ ರೋಗ ಹರಡುವ ಎಲ್ಲ ಅವಕಾಶಗಳಿವೆ. ಶಾಲೆಯ ನಾಲ್ಕು ಕೋಣೆಗಳು ಮಳೆಯಿಂದಾಗಿ ಸೋರುತ್ತಿವೆ. ಕೋಣೆಯ ಗೋಡೆ ಹಾಗೂ ಬೀಮ್ ಗಳನ್ನು ಮುಟ್ಟಿದರೆ ಸಿಮೆಂಟ್ ಚಕ್ಕಿ ಉದುರಿ ಬೀಳುತ್ತಿರುವುದರಿಂದ ಶಾಲೆಗೆ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದಾರೆ.

ಇದಲ್ಲದೇ ಅಪಾಯಕಾರಿ ಕೋಣೆಗಳನ್ನು ಕಂಡ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 200 ವಿದ್ಯಾರ್ಥಿಗಳ ಸಂಖ್ಯಾ ಬಲ ಇರುವ ಶಾಲೆಗೆ ನಿತ್ಯ 10-20 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬರುತ್ತಿದ್ದಾರೆ ಎಂದರೆ ಇಲ್ಲಿನ ಪರಿಸ್ಥಿತಿ ಎಂತಹ ಗಂಭೀರವಾಗಿದೆ ಎಂಬುದನ್ನು ಅರಿಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಕೋಣೆಗಳು ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿಯೇ ಮಕ್ಕಳು ಶಾಲೆ ಕಲಿಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಎಂದು ಅವರು ಆಕ್ರೋಶ ವ್ಯಕ್ತಪಡಿಸಿದಾರೆ. ಈಗಾಗಲೇ ಹತ್ತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಇದುವರೆಗೆ ಈ ಕಡೆ ಮುಖ ಮಾಡದೇ ಇರುವುದು ನಾಚಿಕಗೇಡು ಸಂಗತಿಯಾಗಿದೆ.

ಈಶಾಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರ, ಬಡ ರೈತರ ಮಕ್ಕಳೇ ಓದುತ್ತಿದ್ದು, ಯಾವುದೇ ರಾಜಕಾರಣಿ, ಅಧಿಕಾರಿಗಳ ಮಕ್ಕಳು ಓದುತ್ತಿಲ್ಲ ಈ ಕಾರಣಕ್ಕೆ ಸಂಬಂಧಪಟ್ಟವರು ಇತ್ತ ಹೊರಳಿಯೂ ನೋಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ದೂರಿದ್ದಾರೆ.

ಶಾಲೆಯಲ್ಲಿ ಈ ಸಮಸ್ಯೆಯಿಂದಾಗಿ ಹೆಚ್ಚು ಕಮ್ಮಿ ಆದಲ್ಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ. ಮತ್ತು ದುರ್ಘಟನೆ ಸಂಭವಿಸಿದಲ್ಲಿ ಅವರ ವಿರುದ್ಧ ಗುರುಮಠಕಲ್ ಠಾಣೆಯಲ್ಲಿ ದೂರು ದಾಖಲಿಸಬೇಕಾಗುತ್ತದೆ.

ತಕ್ಷಣ 5 ದಿನಗಳಲ್ಲಿ ಶಿಥಿಲಗೊಂಡ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸಬೇಕು, ಶಾಲೆ ಹಿಂಭಾಗದಲ್ಲಿರುವ ಬೃಹತ್ ಗುಂಡಿಯನ್ನು ಮುಚ್ಚಿ ಸಾಂಕ್ರಾಮಿಕ ರೋಗ ಭೀತಿಯಿಂದ ಮಕ್ಕಳನ್ನು ಕಾಪಾಡಬೇಕು ಇಲ್ಲದಿದ್ದರೆ ಶಾಲಾ ಮಕ್ಕಳು ಮತ್ತು ಪೊಷಕರೊಂದಿಗೆ ವಿಜಯಪುರ- ಹೈದ್ರಾಬಾದ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆಂಜಿನೇಯ ಬೆಳಗೇರಿ, ತಾಯಪ್ಪ ಕಾಳಬೆಳಗುಂದಿ, ಗಣಪೂರ ಗ್ರಾಮದ ಮುಖಂಡರಾದ ನರಸಪ್ಪ, ಶಂಕರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ, ಗ್ರಾಪಂ ಸದಸ್ಯರಾದ ನರಸಿಂಗಪ್ಪ, ಭೀಮರಾಯ, ತಾಯಪ್ಪ ಹೊಸಡಿ, ನಿಂಗಪ್ಪ, ಚೆನ್ನಪ್ಪ, ಭೀಮರಾಯ ಬಂಕಲಗಿ, ಕಾಂತು, ಆಂಜಿನೇಯ, ಮಾದೇವಪ್ಪ, ಮಾದೇವ, ತಾಯಪ್ಪ ನವಾಬುರಜ ಸೇರಿ ಅನೇಕ ಜನರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ.*

Share This Article