ರಾಜ್ಯ ಸುದ್ದಿ
ಬೆಂಗಳೂರು, ಏ.೧೨:
ರಾಜ್ಯ ಕಾಂಗ್ರೆಸ್ ಸರ್ಕಾರದ ದರ ಏರಿಕೆ, ಭ್ರಷ್ಟಾಚಾರ, ದುರಾಡಳಿತ ಖಂಡಿಸಿ ಜೆಡಿಎಸ್ ಹಮ್ಮಿಕೊಂಡಿರುವ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಅಭಿಯಾನಕ್ಕೆ ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಅಭಿಯಾನಕ್ಕೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮೊಳಗಿಸಿದರು.
ಜೆಡಿಎಸ್ ಪ್ರತಿಭಟನೆಗೆ ಪೂರ್ವಭಾವಿಯಾಗಿ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್, ಈ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ಜತೆಗೆ ಐದು ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಸಂಪತ್ತನ್ನ ಲೂಟಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ದುರಾಡಳಿತ, ಬೆಲೆ ಏರಿಕೆ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ರಾಜ್ಯದ ಜನರ ಮನೆ ಮನೆಯ ಮಾತು. ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.
ನಾವು ನಮ್ಮ ಜವಾಬ್ದಾರಿ ಕರ್ತವ್ಯ ಅರಿತು ಈ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸಚಿವರಾದ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಬೃಹತ್ ಹೋರಾಟ ಮಾಡುತ್ತಿದ್ದೇವೆ. ಆಡಳಿತ ವೈಫಲ್ಯ, ಭ್ರಷ್ಟಾಚಾರ ಮಾತ್ರವಲ್ಲ ಅನೇಕ ವಿಚಾರಗಳ ಬಗ್ಗೆ ನಮ್ಮ ಹೋರಾಟ ನಡೆಸಲಿಸಲಿದ್ದೇವೆ. ಇದು ಒಂದು ದಿನದ ಅಭಿಯಾನ ಅಲ್ಲ ಸರ್ಕಾರ ಇರೋ ತನಕ ನಮ್ಮ ಹೋರಾಟ ನಿರಂತರ ವಾಗಿರುತ್ತದೆ ಎಂದು ಹೇಳಿದರು.
ನಮಗೆ ಜಾಸ್ತಿ ಬಹುಮತ ಎಂದು ಈ ಸರ್ಕಾರ ದರ್ಪ ತೋರಿಸುತ್ತಿದೆ. ದಪ್ಪ ಚರ್ಮದ ಈ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ. ಜನ ಇವರು ಏನೋ ಒಳ್ಳೆಯದು ಮಾಡುತ್ತಾರೆ ಎಂದು ವೋಟು ಹಾಕಿ ಗೆಲ್ಲಿಸಿದರು. ಆದರೆ ಸುಲಿಗೆಯನ್ನೇ ಮೂಲ ಮಂತ್ರ ಮಾಡಿಕೊಂಡಿರುವ ಈ ಸರ್ಕಾರ, ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ನಾವು ಸುಮ್ಮನೆ ಇರಲು ಸಾಧ್ಯ ಇಲ್ಲ ಎಂದು ಹೇಳಿದರು.
ಐದು ವರ್ಷ ಕಾಲ ಜನ ಹಿಂಸೆ ಅನುಭವಿಸಬೇಕಾಗಿದೆ. ಈಗಾಗಲೇ ಎರಡು ವರ್ಷ ಚಿತ್ರಹಿಂಸೆ ಕೊಟ್ಟಾಗಿದೆ. ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಚುನಾವಣೆ ನಡೆಸಲು ಧೈರ್ಯ ಮಾಡುತ್ತಿಲ್ಲ. ವಿಪಕ್ಷ ಪ್ರತಿಭಟನೆ ಮಾಡಿದಾಗ, ಅದಕ್ಕೆ ಪ್ರತಿಯಾಗಿ ಸರ್ಕಾರವೇ ಇನ್ನೊಂದು ಕಾರ್ಯಕ್ರಮ ರೂಪಿಸುತ್ತದೆ. ಕೆಪಿಸಿಸಿ ಅಧ್ಯಕ್ಷರದ್ದೇ ಇದೆಲ್ಲ ತಂತ್ರಗಾರಿಕೆ ಅಂತಿಮವಾಗಿ ಜನರ ಮುಂದೆ ಜನಪ್ರತಿನಿಧಿಗಳು ತಲೆ ಬಾಗಲೇಬೇಕು ಎಂದು ಕಿಡಿಕಾರಿದರು.
ಇನ್ನೂ, ಕಮಿಷನ್ ಅನ್ನೋದಕ್ಕೆ ಲಿಮಿಟೆಷನ್ ಇಲ್ಲ. ಕಳೆದ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ಸಿಗರು ಅಂದು ಇದ್ದಂತ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು. ಶೇ. ೪೦ ಕಮಿಷನ್ ಆರೋಪ ಮಾಡಿದ್ದರು. ನಮಗೊಂದು ಅವಕಾಶ ಕೊಡಿ ನಾವು ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಭ್ರಷ್ಟಾಚಾರ ಅನ್ನುವುದು ಯಾವ ಹಂತಕ್ಕೆ ತಲುಪಿದೆ ಎಂದರೆ ಪರ್ಸೆಂಟೇಜ್ ಅನ್ನುವುದಕ್ಕೆ ಲಿಮಿಟೆಷನ್ ಇಲ್ಲ, ಲಿಮಿಟೆಷನ್ ಮೀರಿ ಹೋಗಿದೆ ಎಂದು ಹರಿಹಾಯ್ದರು.