ಹುಬ್ಬಳ್ಳಿ: 4 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹50 ಕೋಟಿ ಅನುದಾನ; ಸಿ.ಎಂ ಭರವಸೆ

YDL NEWS
1 Min Read

ಹುಬ್ಬಳ್ಳಿ: ‘ಧಾರವಾಡ ಜಿಲ್ಲೆಯ ನವಲಗುಂದ, ಕಲಘಟಗಿ, ಹುಬ್ಬಳ್ಳಿ-ಧಾರವಾಡ ಪೂರ್ವ ಹಾಗೂ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹50 ಕೋಟಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ತಿಳಿಸಿದ್ದಾರೆ.

 

‘ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ನೇತೃತ್ವದಲ್ಲಿ ಬುಧವಾರ ಸಭೆ ನಡೆಯಿತು. ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಸೂಪರ್‌ ಸ್ಪೆಷಾಲಿಟಿ ವೈದ್ಯಕೀಯ ಕಾಲೇಜು, ಹೆಚ್ಚು ವಿದ್ಯಾರ್ಥಿನಿಲಯಗಳ ಸ್ಥಾಪನೆ, ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಹಾಗೂ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಯಿತು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

 

‘ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ₹50 ಕೋಟಿ ಜೊತೆಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಬೇಕೆಂಬ ಮನವಿಗೂ ಸ್ಪಂದಿಸಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಜೀರ್‌ ಅಹ್ಮದ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌, ಜಂಟಿ ಕಾರ್ಯದರ್ಶಿ ಬಿ.ಬಿ. ಕಾವೇರಿ, ಆಪ್ತ ಸಹಾಯಕ ವೆಂಕಟೇಶ ಇದ್ದರು’ ಎಂದು ಮಾಹಿತಿ ನೀಡಿದ್ದಾರೆ.

Share This Article