ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿ ನಡೆಯಲಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಸಚಿವ ಸಂಪುಟದಿಂದ ಕೈ ಬಿಡಲಾಗಿದ್ದು, ರಾಜ್ಯಪಾಲರು ಅದಕ್ಕೆ ಅನುಮೋದನೆ ಕೂಡ ನೀಡಿದ್ದಾರೆ.
ಮತಗಳ್ಳತನ ಕುರಿತು ದೇಶದ್ಯಾಂತ ತೀವ್ರ ಸಂಚಲನ ಸೃಷ್ಟಿಸಿದ್ದ ರಾಹುಲ್ ಗಾಂಧಿ ಹೇಳಿಕೆಗೆ, ಸಚಿವ ರಾಜಣ್ಣ, ತದ್ವಿರುದ್ದ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದರು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ತಕ್ಷಣ ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆ ಪಡೆಯುವಂತೆ ಸೂಚಿಸಿತ್ತು.
ಸಿದ್ದರಾಮಯ್ಯ ತಮ್ಮ ಆಪ್ತನನ್ನು ಉಳಿಸಿಕೊಳ್ಳಲು ನಡೆಸಿದ ಕಸರತ್ತು ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.
ಹೀಗಾಗಿ, ಸಚಿವ ರಾಜಣ್ಣ ಸಿಎಂ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯಅವರ ಕೈಯಲ್ಲಿ ರಾಜೀನಾಮೆ ಪತ್ರ ನೀಡಿ ಬಂದಿದ್ದರು. ಅದನ್ನು ತಕ್ಷಣ ರಾಜ್ಯಪಾಲರ ಕಚೇರಿಗೆ ರವಾನಿಸಿದ್ದರು. ರಾಜ್ಯಪಾಲರಾದ ಥಾವರ್ ಚಂದ್ ಗ್ಯೆಹ್ಲೋಟ್ ಅದಕ್ಕೆತಕ್ಷಣವೇ ಒಪ್ಪಿಗೆ ಸೂಚಿಸಿದರು.
ಸದನದಲ್ಲಿ ಪ್ರತಿಧ್ವನಿಸಿದ ರಾಜಣ್ಣ ರಾಜೀನಾಮೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟಕ್ಕೆ ವೇದಿಕೆಯಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರ ಪಿತೂರಿ ಇದೆ. ಕಾಲಬಂದಾಗ ಅದರ ಕುರಿತು ತಿಳಿಸುವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ರಾಜಣ್ಣ ಗೇಟ್ ಪಾಸ್ ಗೆ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಾಗ ರಾಜ್ಯದಲ್ಲಿ ನಮ್ಮ ಸರಕಾರವೇ ಇತ್ತಲ್ಲ. ಆಗಲೇ ತಪ್ಪನ್ನು ಸರಿಪಡಿಸಬಹುದಿತ್ತು. ಆಗ ಸುಮ್ಮನೇ ಇದ್ದು, ಈಗ ಹೇಳಿದರೆ ಏನು ಪ್ರಯೋಜನ ಎಂದು ಹೇಳಿದ್ದರು.
ಇದಲ್ಲದೆ, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸಿದ್ದು ಸರಿಯಲ್ಲ ಎಂದು ಗುಡುಗಿದ್ದರು. ಇದಲ್ಲದೆ, ಡಿಕೆಶಿ ವಿರುದ್ದ ನಿರಂತರ ಕಿಡಿ, ಸದನದಲ್ಲಿ 48 ಶಾಸಕರ ಹನಿಟ್ರಾಪ್ ಹೇಳಿಕೆ ಹೀಗೆ ಸಾಲು ಸಾಲು ವಿವಾದದ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.