ದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಏಳು ಮಂದಿ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ
ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾದ ಜೆ.ಬಿ.ಪರ್ದಿವಾಲಾ, ಆರ್.ಮಹದೇವನ್ ಅವರನ್ನೊಳಗೊಂಡ ನ್ಯಾಯಪೀಠ, 2024 ಡಿಸೆಂಬರ್ ನಲ್ಲಿ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಅನೇಕ ದೋಷಗಳಿವೆ ಎಂದು ಹೇಳಿ ಜಾಮೀನು ರದ್ದುಪಡಿಸಿತು.
ಆರೋಪಿ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ ಎಂಬ ಸಂದೇಶವನ್ನು ರವಾನಿಸಿತು.
ಅಂದಹಾಗೆ, ಪ್ರಾಸಿಕ್ಯೂಷನ್ ಪರ ವಕೀಲರ ಪ್ರಬಲ ವಾದ ಮಂಡನೆಯೂ ಇದರಲ್ಲಿ ಮಹತ್ವದ್ದಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ, ದರ್ಶನ್ ವಿರುದ್ಧದ ಕೊಲೆ ಕೇಸ್, ಕಿಡ್ನ್ಯಾಪ್ ಆರೋಪ, ಸಾಕ್ಷ್ಯ ನಾಶ ಸೇರಿದಂತೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟರು. ಸಿದ್ದಾರ್ಥ ಲೂತ್ರಾ ಅವರಿಗೆ ಎಲ್ಲ ಮಾಹಿತಿಯನ್ನು ನೀಡಿದ್ದು ಕರ್ನಾಟಕದ ಹಿರಿಯ ವಕೀಲ ಪ್ರಸನ್ನ ಕುಮಾರ್.
ದಯಾನಂದ್ ಅವರ ನೈತಿಕ ಬಲ ಹೆಚ್ಚಿಸಿದ ತೀರ್ಪು:
ಇವರು ಬೆಂಗಳೂರಿನ ಕೆಳ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ. ಪ್ರಸನ್ನಕುಮಾರ್ ಅವರನ್ನು ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರು ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಲು ನೇಮಿಸಿಕೊಂಡಿದ್ದರು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಇಡೀ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಿದ ಕೀರ್ತಿ ದಯಾನಂದ್ ಅವರಿಗೂ ಸಲ್ಲುತ್ತದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ಮತ್ತು ಪ್ರಸನ್ನಕುಮಾರ್, ಅನಿಲ್ ಸಿ ನಿಶಾನಿ, ಡಿ.ಎಲ್, ಚಿದ್ದಾನಂದ ಅವರು ಸಿಜೆಐ ಕೋರ್ಟ್ ಮುಂದೆ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ.