ಸೆಂಟ್ರಲ್ ನಿಂದ ಸ್ಪರ್ಧಿಸಲು ಕ್ರೈಸ್ತರಿಗೆ ಟಿಕೆಟ್ ನೀಡಲು ಒತ್ತಾಯ.

KTN Admin
1 Min Read
ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವರ್ಧಿಸಲು ಕ್ರೈಸ್ತ ಧರ್ಮದವರಾದ ಬರ್ತಲೋಮಿಯೊ ಅವರಿಗೆ ಟಿಕೆಟ್  ನೀಡಬೇಕೆಂಬುದು ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಅಧ್ಯಕ್ಷ ರಪಾಯಲ್ ರಾಜ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬರ್ತಲೋಮಿಯೊ 30 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪಕ್ಷ ನಿಷ್ಠೆ ಮತ್ತು ಸಮಾಜ ಸೇವೆಯನ್ನು ಪರಿಗಣಿಸಬೇಕು ಹಾಗೂ ಕ್ರೈಸ್ತರಿಗೆ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಿಂದ  ಟಿಕೆಟ್ ನೀಡಬೇಕೆಂದು ಆಗ್ರಹಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ  ಬಂದಾಗಿನಿಂದಲೂ  ಕ್ರೈಸ್ತರು ಕಾಂಗ್ರೆಸ್ ಪರವಾಗಿ ಎಲ್ಲಾ ಚುನಾವಣೆಗಳಲ್ಲೂ ಮತ ನೀಡಿದ್ದಾರೆ. ಅಲ್ಪ ಸಂಖ್ಯಾತರಾದ ಕ್ರೈಸ್ತರು ಅಂದಿನಿಂದಲೂ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿದ್ದಾರೆಂದು ವಿಷಾದದಿಂದ ನಮ್ಮ ಸಂಘಟನೆ ಹೇಳಬಯಸುತ್ತಿದೆ.  ಆದರೂ ಶಾಂತಿ ಪ್ರಿಯರಾದ ನಮ್ಮ ಧರ್ಮಿಯರು ಯಾವುದೇ ರೀತಿಯ ಒತ್ತಡವನ್ನು ಕಾಂಗ್ರೆಸ್ ಪಕ್ಷದ ಮೇಲಾಗಲಿ ಅಥವಾ ರಾಜಕಾರಣಿಗಳ ಮೇಲಾಗಲಿ ಹೇರಿಲ್ಲ.  ಶಾಂತಿಯುತವಾಗಿ ಎಲ್ಲ ಚುನಾವಣೆಗಳಲ್ಲೂ ಕ್ರೈಸ್ತ ಧರ್ಮಿಯರಿಗೆ ಸೂಕ್ತ ಸಂಖ್ಯೆಯ ಟಿಕೆಟ್ ನೀಡುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದಾಗ್ಯೂ ಕಾಂಗ್ರೆಸ್ ಪಕ್ಷ ಸೂಕ್ತ ಅವಕಾಶಗಳನ್ನು ನೀಡಿಲ್ಲ ಎಂಬುದು ದುರಾದೃಷ್ಟಕರ ಸಂಗತಿ ಎಂದರು.
ಬೆಂಗಳೂರು ಕೇಂದ್ರ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ರೈಸ್ತ ಧರ್ಮಿಯರು ಬಹು ಸಂಖ್ಯಾತರಿದ್ದಾರೆ.  ಅಷ್ಟೇ ಅಲ್ಲ ಮುಸ್ಲಿಂರಷ್ಟೆ ಸಂಖ್ಯೆಯ ಮತದಾರರಿದ್ದಾರೆ. ಈ ಕ್ಷೇತ್ರದಿಂದ ಕ್ರೈಸ್ತ ಧರ್ಮಿಯರಿಗೆ ಲೋಕ ಸಭಾ ಟಿಕೆಟ್ ನೀಡಿದರೆ ಈ ಕ್ಷೇತ್ರದಿಂದ ಬರ್ತಲೋಮಿಯೊ ಜಯಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.  ಕಾಂಗ್ರೆಸ್ ಪಕ್ಷಕ್ಕೆ ಕ್ರೈಸ್ತರು ನೀಡಿರುವ ನಿರಂತರವಾದ ಬೆಂಬಲ ಮತ್ತು ರಾಜ್ಯಕ್ಕೆ ಕ್ರೈಸ್ತ ಮಿಷನರಿಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕ್ರೈಸ್ತ ಧರ್ಮದವರಾದ ಬರ್ತಲೋಮಿಯೊ ಅವರಿಗೆ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವರ್ಧಿಸುವಂತೆ ಕಾಂಗ್ರೆಸ್ ಟಿಕೆಟ್  ನೀಡಬೇಕೆಂದರು. ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಉಪಾಧ್ಯಕ್ಷ ಜಾನ್ ಬ್ರಿಟೋ ಸಂಘದ ಪದಾಧಿಕಾರಿಗಳಾದ ಮರಿಜಾನ್, ಥಾಮಸ್, ಭಾಗವಹಿಸಿದ್ದರು.
Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ