ದುಬೈ; ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಆರಂಭದಲ್ಲೇ ತತ್ತರಿಸಿ ಹೋಗಿದೆ.
ಇನ್ನು ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ತಮ್ಮ ತಂಡದ ಬೌಲರ್ ಬಳಿ ಕೈಮುಗಿದು ಕ್ಷಮೆಯಾಚಿಸಿದ ಅಪರೂಪದ ಘಟನೆ ಕೂಡಾ ನಡೆದಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, ಟಾಸ್ ಗೆದ್ದು ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಬಾಂಗ್ಲಾದೇಶ ತಂಡಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿ ಮೊದಲ ಓವರ್‌ನಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಕಬಳಿಸಿ ಶಾಕ್ ನೀಡಿದರು. ಇನ್ನು ಇನ್ನಿಂಗ್ಸ್‌ನ ಎರಡನೇ ಹಾಗೂ ಹರ್ಷಿತ್ ರಾಣಾ ಎಸೆದ ತಮ್ಮ ಪಾಲಿನ ಮೊದಲ ಓವರ್‌ನಲ್ಲಿ ನಾಯಕ ನಜ್ಮುಲ್ ಹೊಸೈನ್ ಶಾಂತೋ ಅವರನ್ನು ಬಲಿ ಪಡೆಯುವ ಮೂಲಕ ಬಾಂಗ್ಲಾ ಪಡೆಗೆ ಮತ್ತೊಂದು ಶಾಕ್ ನೀಡಿದರು. ಇನ್ನು ಮೆಹದಿ ಹಸನ್ ಮಿರಜ್ ಕೇವಲ 5 ರನ್ ಗಳಿಸಿ ಶಮಿಗೆ ಎರಡನೇ ಬಲಿಯಾದರು. 26 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾದೇಶ ತಂಡವು 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಅಕ್ಷರ್ ಪಟೇಲ್ ಹ್ಯಾಟ್ರಿಕ್ ಜಸ್ಟ್ ಮಿಸ್: ಇನ್ನು 9ನೇ ಓವರ್‌ನಲ್ಲಿ ಬೌಲಿಂಗ್ ಮಾಡಲಿಳಿದ ಅಕ್ಷರ್ ಪಟೇಲ್ ತಾವೆಸೆದ ಮೊದಲ ಓವರ್‌ನಲ್ಲೇ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಮೂರನೇ ಎಸೆತದಲ್ಲಿ ಹ್ಯಾಟ್ರಿಕ್ ಕನಸಿನೊಂದಿಗೆ ಎಸೆದ ಚೆಂಡು ಝಕರ್ ಅಲಿ ಬ್ಯಾಟ್ ಅಂಚನ್ನು ಸವರಿ ನೇರವಾಗಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಕೈಗೆ ಹೋಯಿತು. ಆದರೆ ಆತುರದಲ್ಲಿ ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲುವುದರೊಂದಿಗೆ ಅಕ್ಷರ್ ಹ್ಯಾಟ್ರಿಕ್ ವಿಕೆಟ್ ಕನಸು ನುಚ್ಚುನೂರಾಯಿತು.
https://x.com/ImTanujSingh/status/1892521434410360954?ref_src=twsrc%5Etfw%7Ctwcamp%5Etweetembed%7Ctwterm%5E1892521434410360954%7Ctwgr%5E62f6f96bf18266503c2c64d87a1cd5227138a9d5%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಅಕ್ಷರ್ ಕ್ಷಮೆ ಕೋರಿದ ರೋಹಿತ್: ಇನ್ನು ಸುಲಭ ಕ್ಯಾಚ್ ಕೈಚೆಲ್ಲಿದ ನಾಯಕ ರೋಹಿತ್ ಶರ್ಮಾ ನೆಲಕ್ಕೆ ಕೈಬಡಿದು ಬೇಸರ ಹೊರಹಾಕಿದರು. ಇನ್ನು ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಅವಕಾಶ ಹಾಳು ಮಾಡಿದ್ದಕ್ಕಾಗಿ ನಾಯಕ ರೋಹಿತ್ ಶರ್ಮಾ ಅಕ್ಷರ್ ಪಟೇಲ್‌ಗೆ ಕೈಮುಗಿದು ಕ್ಷಮೆಯಾಚಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಭಾರತ ಎದುರು ಒಂದು ಹಂತದಲ್ಲಿ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾದೇಶ ತಂಡ ಕೊಂಚ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಸಿಕ್ಕ ಜೀವದಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಜಕರ್ ಅಲಿ 34 ರನ್ ಹಾಗೂ ತೌಹಿದ್ ಹೃದೊಯ್ 34 ರನ್ ಗಳಿಸಿದ್ದು, 6 ವಿಕೆಟ್‌ಗೆ 124 ಎಸೆತಗಳನ್ನು ಎದುರಿಸಿ ಮುರಿಯದ 68 ರನ್‌ಗಳ ಜತೆಯಾಟವಾಡಿದೆ. 29 ಓವರ್ ಅಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದ್ದು, ಗೌರವಾನ್ವಿತ ಮೊತ್ತ ಕಲೆಹಾಕಲು ಹೋರಾಡುತ್ತಿದೆ.