ಬೆಂಗಳೂರು, ಮಾ.08“ಸಿಎಂ ಸಿದ್ದರಾಮಯ್ಯ ಅವರು ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್ ನಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ಸುಮಾರು 94 ಸಾವಿರ ಕೋಟಿ ಮೊತ್ತದ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಇದಕ್ಕಾಗಿ ರಾಜ್ಯದ ಮಹಿಳೆಯರ ಪರವಾಗಿ ಧನ್ಯವಾದ ತಿಳಿಸುತ್ತೇನೆ” ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಸೌಮ್ಯ ರೆಡ್ಡಿ ಅವರು ಶನಿವಾರ ಮಾತನಾಡಿದರು.
“ಇಂದು ಮಹಿಳಾ ದಿನ ಆಚರಿಸುತ್ತಿದ್ದು, ಮಹಿಳೆಯರ ಪರವಾದ ಬಜೆಟ್ ಮಂಡಿಸಿರುವ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ರಾಜ್ಯದ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಾಣಂತಿಯರ ಸಾವು ನಿಯಂತ್ರಿಸಲು 320 ಕೋಟಿ ಅನುದಾನ ನೀಡಲಾಗಿದೆ. 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಹಣ ನೀಡುವ ಮೂಲಕ ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಕ್ರಾಂತಿಯೇ ನಡೆಯುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಹಣವನ್ನು ಮಹಿಳೆಯರು ಹೇಗೆಲ್ಲಾ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ” ಎಂದು ತಿಳಿಸಿದರು.
“ಇತ್ತೀಚೆಗೆ ಬೀದರ್ ಗೆ ಹೋಗಿದ್ದಾಗ ಅಲ್ಲಿನ ಮಹಿಳೆಯೊಬ್ಬಳು ಈ ಯೋಜನೆ ಹಣದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಗಂಡ ಹಾಗೂ ಮಗನ ನೆರವು ಪಡೆಯದೇ ಚಿಕಿತ್ಸೆ ಪಡೆದೆ ಎಂದು ಹೇಳಿದರು. ಮತ್ತೆ ಕೆಲವರು, ಮಕ್ಕಳ ಶಿಕ್ಷಣಕ್ಕೆ, ಮತ್ತೆ ಕೆಲವರು ಸಣ್ಣ ವ್ಯಾಪಾರ ಆರಂಭಿಸಲು ಈ ಹಣ ಬಳಸಿಕೊಳ್ಳುತ್ತಿದ್ದಾರೆ. ಉಚಿತ ಬಸ್ ಪ್ರಯಾಣದಿಂದ 400 ಕೋಟಿಗೂ ಹೆಚ್ಚು ಟ್ರಿಪ್ ಮಾಡಿದ್ದಾರೆ” ಎಂದು ತಿಳಿಸಿದರು. .
“ಐದು ತಾಲೂಕಿನಲ್ಲಿ ಅಕ್ಕ ಕೆಫೆ ಆರಂಭಿಸಲು ನಿರ್ಧರಿಸಲಾಗಿದೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನ 1000 ಏಱಿಕೆ ಮಾಡಿದ್ದಾರೆ. 10 ನಗರಗಳಲ್ಲಿ ಮಹಿಳೆಯರಿಗೆ ವಿಶೇಷವಾಗಿ ಇಂದಿರಾ ಕ್ಯಾಂಟೀನ್ ಆರಂಭ ಮಾಡಲಾಗುತ್ತಿದೆ. ಹೀಗೆ ಮಹಿಳೆಯರು ಹಾಗೂ ಮಕ್ಕಳ ಪರವಾಗಿ ಮಂಡಿಸಿರುವ ಈ ಬಜೆಟ್ ಐತಿಹಾಸಿಕ ಬಜೆಟ್ ಆಗಿದೆ. ಇದರ ಜತೆಗೆ ಎಲ್ಲಾ ವರ್ಗ, ಎಲ್ಲಾ ರಂಗಕ್ಕೂ ಈ ಬಜೆಟ್ ನಲ್ಲಿ ಅನುದಾನ ನೀಡಲಾಗಿದೆ. ನಿನ್ನೆಯ ಬಜೆಟ್ ನಲ್ಲಿ ಅರ್ಚಕರ ವೇತನವನ್ನು ಏರಿಕೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಈ ಕೆಲಸ ಮಾಡಿದ್ದರೇ? ಎಲ್ಲಾ ಸಮುದಾಯ, ಜಾತಿ, ಧರ್ಮದವರಿಗೂ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ. ಆದರೂ ಟೀಕೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
*ಬಿಜೆಪಿಗರ ಹೊಟ್ಟೆ ಕಿಚ್ಚಿಗೆ ಔಷಧಿ ರವಾನೆ*
“ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆರೋಗ್ಯದ ಬಗ್ಗೆ ಯೋಚಿಸದೆ ನಿನ್ನೆ ಸುದೀರ್ಘವಾಗಿ ಬಜೆಟ್ ಮಂಡಿಸಿದ್ದಾರೆ. ಆದರೂ ಅವರು ಮಾಡುತ್ತಿರುವ ಸುಳ್ಳು ಆರೋಪ ಕೇಳಿ ಬೇಸರವಾಗಿದೆ. ಬಿಜೆಪಿಗೆ ನಾಲ್ಕು ವರ್ಷಗಳ ಕಾಲ ಸರ್ಕಾರ ಮಾಡುವ ಅವಕಾಶ ಸಿಕ್ಕಿತ್ತು. ಇಂತಹ ಉತ್ತಮ ಯೋಜನೆ ನೀಡುವ ಅವಕಾಶಗಳಿದ್ದವು ಆದರೂ ಮಾಡಲಿಲ್ಲ. ಹೀಗಾಗಿ ನಮ್ಮ ಮುಖ್ಯಮಂತ್ರಿಗಳ ಬಜೆಟ್ ವಿರುದ್ಧ ಅಸೂಯೆ, ಹೊಟ್ಟೆಕಿಚ್ಚು ಪ್ರದರ್ಶಿಸುತ್ತಿದ್ದಾರೆ. ಉತ್ತಮ ಕೆಲಸ ಮಾಡಿದಾಗ ಅದನ್ನು ಶ್ಲಾಘಿಸಬೇಕು. ಅಸೂಯೆಗೆ ಮದ್ದಿಲ್ಲ ಎನ್ನುತ್ತಾರೆ. ಆದರೂ ಬಿಜೆಪಿ ನಾಯಕರ ಹೊಟ್ಟೆಯುರಿ ಹಾಗೂ ಹೊಟ್ಟೆಕಿಚ್ಚಿಗೆ ಪರಿಹಾರವಾಗಿ ಅವರಿಗೆ ಔಷಧಿಗಳನ್ನು ಬಿಜೆಪಿ ಕಚೇರಿಗೆ ಕಳುಹಿಸುವ ಮೂಲಕ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.