ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿಯ ಅಡುಗೆ ಕೋಣೆಗೆ ಪ್ರವೇಶಿಸಿದ್ದ ಇಬ್ಬರು ಮುಸ್ಲಿಂ ಯುವಕರು ಆಹಾರದಲ್ಲಿ ವಿಷಪ್ರಾಶನ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ ಮಾಡಿದ್ದಾರೆ.
ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಬರುವ ದಿನಗಳಲ್ಲಿ ಸ್ವಾಮೀಜಿ ಚೇತರಿಸಿಕೊಂಡ ನಂತರ ಚರ್ಚಿಸಿ ಮುಂದಿನ ತನಿಖೆಗೆ ಆಗ್ರಹಿಸುತ್ತೇವೆ ಎಂದು ಹೇಳಿದರು.
ಅಲ್ಲದೆ, ಈ ಹಿಂದೆ ಪಂಚಮಸಾಲಿ ಪೀಠದಲ್ಲಿ ಇದ್ದ ಸಿಸಿಟಿವಿ ಕ್ಯಾಮರಾ ತೆಗೆಸಿದ್ದಾರೆ. ಸ್ವಾಮೀಜಿ ಮತ್ತೆ ಅವುಗಳನ್ನು ಅಳವಡಿಸಿದ್ದಾರೆ. ಅದರಲ್ಲಿ ಅವು ರೆಕಾರ್ಡ್ ಆಗಿದೆಯೋ ಇಲ್ಲವೋ ನೋಡಬೇಕು ಎಂದು ಬೆಲ್ಲದ ಹೇಳಿದರು.
ಇದೇ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರಕಾರದ ಹುನ್ನಾರ ನಡೆಸಿದೆ. ಸ್ವಾಮೀಜಿ ಸಮಾಜಕ್ಕಾಗಿ ರಕ್ತ ಹರಿಸಿದ್ದಾರೆ.
ಅವರನ್ನು ಸಮಾಜ ಎಂದಿಗೂ ಕೈ ಬಿಡಲ್ಲ. ಬೇರೆ ಸ್ವಾಮೀಜಿಯನ್ನು ಟ್ರಸ್ಟ್ ನೇಮಿಸಿದರೂ ಸಮಾಜಅದನ್ನು ಸ್ವೀಕರಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಪರವಾಗಿ ದಶಕಗಳಿಂದ ಹಗಲಿರುಳು ಹೋರಾಟ ಮಾಡುತ್ತಿರುವ ಸ್ವಾಮೀಜಿಗೆ ಯಾರಿಂದಲೂ ಮಟ್ಟ ಹಾಕಲು ಸಾಧ್ಯವಿಲ್ಲ ಸಮಾಜ ಎಲ್ಲವನ್ನು ಗಮನಿಸುತ್ತಿದ್ದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.
ಇದಕ್ಕೆ ಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಸರಕಾರಕ್ಕೆ ಹಾಗೂ ವಿಜಯಾನಂದ ಕಾಶಪ್ಪನವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿ, ಎಚ್ಚರಿಕೆ ನೀಡಿದರು.
ಟ್ರಸ್ಟ್ ನವರು ಈ ಹಿಂದೆ ಸ್ವಾಮೀಜಿ ಮಠಕ್ಕೆ ಬರುತ್ತಿಲ್ಲ. ಮಠದಲ್ಲಿ ಅನೇಕ ಚಟುವಟಿಕೆ ನಡೆಯುತ್ತಿವೆ ಎಂದು ಕೆಲವರು ಕೀಲಿ ಹಾಕಿದ್ದರು. ಊರಿನ ಜನ ಅದನ್ನು ತೆಗೆಸಿ, ಪ್ರವೇಶ ಮಾಡಿಸಿದ್ದರು. ಆಗ ಸ್ವಾಮೀಜಿ ಮಠ ಪ್ರವೇಶ ಮಾಡಿದ್ದರು.
ಆದ್ರೆ ಮಠದಲ್ಲಿ ಇದ್ದ ಇಬ್ಬರು ಮುಸ್ಲಿಂ ಯುವಕರು ಸ್ವಾಮೀಜಿ ಭೇಟಿಗೆ ಯಾರೆಲ್ಲಾ ಬಂದಿದ್ದಾರೆ. ಅವರ ಪೋನ್ ನಂಬರ್, ವಾಹನ ಸಂಖ್ಯೆ ಬರೆದುಕೊಂಡಿದ್ದರು. ಯಾರು ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದ್ದರೆ, ನಮಗೆ ಟ್ರಸ್ಟ್ ನವರು ಕಳುಹಿಸಿದ್ದರು ಎಂದು ಹೇಳಿದ್ದಾರೆ.
ಅಲ್ಲದೆ, ಅವರಿಬ್ಬರು ಅಡುಗೆ ಮನೆಯಲ್ಲಿ ಪ್ರವೇಶ ಮಾಡಿದ್ದರು. ಇಲ್ಲಿ ಏನು ನಿಮ್ಮ ಕೆಲಸ ಎಂದು ಕೆಲವರು ಅವರಿಗೆ ಹೊರಹಾಕಿದ್ದರು.
ಆ ಬಳಿಕ ಸ್ವಾಮೀಜಿ ಆಹಾರ ಸೇವನೆ ನಂತರ ವಿಷಪ್ರಾಶನ ಮಾಹಿತಿ ನೀಡಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಪಡೆಯುವಂತೆ ಹೇಳಿದ್ದೆ ಎಂದು ಅರವಿಂದ ಬೆಲ್ಲದ ವಿವರಿಸಿದರು.
ಅವರು ಅಡುಗೆ ಮನೆಯ ಪ್ರವೇಶದ ಬಳಿಕವೇ ಆಹಾರ ಸೇವನೆ ನಂತರ ಅಸ್ತವ್ಯಸ್ತ ಆಗಿತ್ತು. ಮೂರುನಾಲ್ಕು ದಿನಗಳ ನಂತರ ಸ್ವಾಮೀಜಿ ಜೊತೆಗೆ ಮಾತನಾಡುತ್ತೇನೆ ಎಂದು ಅರವಿಂದ ಬೆಲ್ಲದ ಹೇಳಿದರು.
ಈ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸ್ವಾಮೀಜಿ ಆಸ್ಪತ್ರೆ ದಾಖಲಾಗಿರುವುದೇ ಪ್ರಚಾರಕ್ಕೆ ಎಂದು ಕುಟುಕಿದರು.
ಅಲ್ಲದೆ, ಕೆಲ ಪಟ್ಟಭದ್ರಹಿತಾಸಕ್ತಿಗಳ ನಮ್ಮನ್ನು ಒಡೆದಾಳುವ ಕೆಲಸ ಮಾಡುತ್ತೀವೆ. ನಮ್ಮನ್ನು ಕೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ಪರೋಕ್ಷವಾಗಿ ಕುಟುಕಿದರು.