ತೀರ್ಥಹಳ್ಳಿ(ಮಲೆನಾಡು): ತೀರ್ಥಹಳ್ಳಿ ತಾಲೂಕು ಸೇರಿದಂತೆ ಮಲೆನಾಡಿನ ಪ್ರತಿ ತಾಲೂಕಲ್ಲೂ ಇದೀಗ ಒಂದು ಕಡೆ ಪರಿಸರ ನಾಶವಾಗುತ್ತಿದ್ದರೆ, ಇನ್ನೊಂದು ಕಡೆ ಮಣ್ಣು ಮಾಫಿಯಾ ಜೋರಾಗಿದೆ.
ಸ್ವಂತ ಜಾಗವಲ್ಲದೆ ಅಕ್ರಮ ಒತ್ತುವರಿ ಹಾಗೂ ಸರ್ಕಾರಿ, ಅರಣ್ಯ ಜಾಗದಲ್ಲೂ ಮಣ್ಣು ಅಕ್ರಮವಾಗಿ ತೆಗೆಯಲಾಗುತ್ತದೆ.
ರೈತ ಅನ್ನದಾತ, ದೇಶದ ಬೆನ್ನೆಲುಬು ಎಂಬ ಮಾತಿದ್ದರೂ ಬಹಳಷ್ಟು ಜನರು ಕೃಷಿ ಚಟುವಟಿಕೆಗಳಿಂದ ದೂರವೇ ಉಳಿಯುತ್ತಿದ್ದಾರೆ. ಪ್ರತಿ ವರ್ಷವೂ ಸಕಾಲಕ್ಕೆ ಮಳೆ ಆಗದೆ ತೊಂದರೆ ಅನುಭವಿಸಿದರೆ, ಇಳುವರಿ ಕುಂಠಿತ, ಮಾರುಕಟ್ಟೆ ಅವ್ಯವಸ್ಥೆಯಿಂದ ಅಕ್ಷರಶಃ ಕಂಗಾಲಾಗಿದ್ದಾನೆ. ಹಾಗಾಗಿ ಸುಲಭವಾಗಿ ಹಣ ಗಳಿಸುವ ಮಾರ್ಗ ಕಂಡುಕೊಳ್ಳುತ್ತಿರುವ ರೈತರು ಭೂತಾಯಿ ಒಡಲಿಗೆ ಕೈಹಾಕಿದ್ದಾರೆ. ಲಕ್ಷಾಂತರ ರೂ. ಆದಾಯದ ಆಸೆಗೆ ಲೋಡ್‌ಗಟ್ಟಲೆ ಮಣ್ಣನ್ನು ಹೆದ್ದಾರಿ ಸೇರಿ ನಾನಾ ಕಾಮಗಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮಲೆನಾಡಿನ ವಿವಿಧೆಡೆ ಮಣ್ಣು ಮಾಫಿಯಾ ತಲೆ ಎತ್ತಿದೆ. ರೈತರಿಂದ ಎಕರೆಗಟ್ಟಲೆ ಜಮೀನುಗಳನ್ನು ಲಕ್ಷಾಂತರ ರೂ. ನೀಡಿ ಗುತ್ತಿಗೆ ಪಡೆದುಕೊಳ್ಳುತ್ತಿದ್ದಾರೆ.
ರೈತರ ಕಣ್ಣೆದುರೇ ಜೆಸಿಬಿಗಳು ಗರ್ಜನೆ ನಡೆಸುತ್ತಿದ್ದು, ದಿನನಿತ್ಯವೂ ನೂರಾರು ಲೋಡ್ ಮಣ್ಣು ಸಾಗಿಸಲಾಗುತ್ತಿದೆ. ಅಧಿಕ ಮಳೆಯಿಂದ ಇತ್ತೀಚಿನ ಕೆಲ ವರ್ಷಗಳಲ್ಲಿ ಜಮೀನುಗಳಲ್ಲಿ ಇಳುವರಿ ಕುಂಠಿತವಾಗುತ್ತಿದೆ. ಒಂದೇ ಬೆಳೆಯನ್ನೇ ಹತ್ತಾರು ವರ್ಷ ಬೆಳೆಯುತ್ತಿದ್ದು ರೋಗ ಸೇರಿ ನಾನಾ ಕಾರಣಗಳಿಂದ ಖರ್ಚು ಮಾಡಿದ ಹಣವೂ ರೈತರ ಕೈಸೇರುತ್ತಿಲ್ಲ. ಹವಾಮಾನ ವೈಪರೀತ್ಯದಿಂದಲೂ ಬೆಳೆಗಳು ಹಾಳಾಗುತ್ತಿದ್ದು ರೈತರು ಆರ್ಥಿಕ ಸಂಕಷ್ಟಕ್ಕೂ ಒಳಗಾಗುತ್ತಿದ್ದಾರೆ. ಆದರೆ ಅದೇ ಕಾರಣಕ್ಕೆ ಮಣ್ಣನ್ನೇ ಮಾರಾಟ ಮಾಡುವುದಕ್ಕೂ ರೈತರು ಮುಂದಾಗಿರುವುದು ವಿಪರ್ಯಾಸವಾಗಿದೆ.
ಪ್ರಕೃತಿ ಮುನಿಸು: ಹವಾಮಾನ ವಿಚಿತ್ರ!
ಮಲೆನಾಡಲ್ಲಿ ಅರಣ್ಯ ನಾಶದಿಂದ ಪ್ರಕೃತಿ ಏರುಪೇರು ಆಗುತ್ತಿದೆ. ಮಳೆ ಕಡಿಮೆ ಆಗುತ್ತಿದೆ. ಬಿಸಿಲು ಹೆಚ್ಚುತ್ತಿದೆ. ಮಣ್ಣು ಮಾಫಿಯಾ ಪರಿಸರ ಅಸಮತೋಲನ ಆಗುತ್ತಿದೆ. ಈ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆ ಕ್ರಮ ತೆಗೆದುಕೊಂಡಿಲ್ಲ.