“ಗುರುಮಿಠಕಲ್ ನಡೆದ ಇಬ್ಬರು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆಯ ಘಟನೆ ಕುರಿತು ಮಾಹಿತಿ ಪಡೆಯಲಾಗಿದೆ. ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬೇಡಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ತಪ್ಪಿತಸ್ತ ಆರೋಪಿಗಳು ಯಾರೇ ಆಗಿದ್ದರು ಸಹ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. – ಡಾ. ನಾಗಲಕ್ಷ್ಮಿ ಚೌದ್ರಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ.”
ಯಾದಗಿರಿ: ಜಿಲ್ಲೆಯ ಗುರುಮಿಟ್ಕಲ್ ನ ಇಂದಿರಾನಗರದ ಬುಡ್ಗ (ಅಲೆಮಾರಿ) ಸಮುದಾಯದ ಇಬ್ಬರು ಚಿಂದಿ ಆಯುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಅವರ ದೇಹಗಳು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾದ ಭೀಕರ ಘಟನೆಯ ವಿರುದ್ಧ ರಾಜ್ಯ ಮಹಿಳಾ ಆಯೋಗ ತೀವ್ರ ಸ್ಪಂದನೆ ವ್ಯಕ್ತಪಡಿಸಿದೆ. ಆಯೋಗವು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವರದಿ ನೀಡುವಂತೆ ಸೂಚಿಸಿದೆ ಎಂದು ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದ್ರಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ. ನಾಗಲಕ್ಷ್ಮಿ ಚೌದ್ರಿ, ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಿಗೆ ಹಾಗೂ ಸರ್ಕಾರದ ಕಾರ್ಯದರ್ಶಿಯವರಿಗೆ ಪತ್ರ ಬರೆದು, ಮೃತ ಯುವತಿಯರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಹಾಗೂ ಅವರ ಕುಟುಂಬಗಳಿಗೆ ಬೇಕಾದ ಎಲ್ಲ ರೀತಿಯ ಸಹಾಯ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಘಟನೆ ಕುರಿತು ಮಹಿಳಾ ಆಯೋಗವು ಗಂಭೀರವಾಗಿ ಗಮನ ಹರಿಸಿದ್ದು, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಕುರಿತು ವಕಾಲತ್ತು ವಹಿಸಿಕೊಂಡಿದೆ. ಸಮುದಾಯದ ಸುರಕ್ಷತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.