‘ಬಿಜೆಪಿ ಸರ್ಕಾರದಲ್ಲಿ ನಿಡ್ತಿದ್ದ ಯೋಜನೆಗಳಿಗೆ ಕಾಂಗ್ರೆಸ್ ಬ್ರೇಕ್’ ಸರ್ಕಾರದ ವಿರುದ್ಧ ಹರಿಹಾಯ್ದ ರಾಜೂಗೌಡ
ಸುರಪುರ: ಕಳೆದ ಎರಡು ವರ್ಷದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ “ರೈತ ವಿದ್ಯಾನಿಧಿ” ಹಾಗೂ 52 ಲಕ್ಷ ರೈತರಿಗೆ ನೀಡುತ್ತಿದ್ದ 4000 ರೂಪಾಯಿ ಕಿಸಾನ್ ಸಮ್ಮಾನ್ ನಿಧಿಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ರಾಜೂಗೌಡ ಅವರು ಹರಿಹಾಯ್ದರು.
ಸುರಪುರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಕೃಷಿ ಪಂಪ್‌ಸೆಟ್‌ಗೆ ಟ್ರಾನ್ಸ್‌ಪಾರ್ಮರ್ ಅಳವಡಿಸಲು ಬಿಜೆಪಿ ಸರ್ಕಾರದಲ್ಲಿ 25 ಸಾವಿರ ರೂಪಾಯಿ ಇತ್ತು. ಆದರೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಪಂಪ್‌ಸೆಟ್‌ಗೆ ಟ್ರಾನ್ಸ್‌ಪಾರ್ಮರ್ ಕೂಡಿಸಲು 3 ಲಕ್ಷ ರೂಪಾಯಿ ಕಟ್ಟುವ ಪರಿಸ್ಥಿತಿ ಇದ್ದು,ಇದು ರೈತರಿಗೆ ಹೊರೆಯಾಗುವಂತೆ ಮಾಡಿದ್ದಾರೆ ಎಂದರು.
ಸುರಪುರ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಶಾಸಕರು ಏಕೆ ತಾರತಮ್ಯ ಮಾಡುತ್ತಿದ್ದೀರಿ.?ಯೂರಿಯಾ ರಸಗೊಬ್ಬರದ ಸಮಸ್ಯೆ ಬಗ್ಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರ ಕೊಡಬೇಕು. ರಾಜ್ಯಮಟ್ಟದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಬೇಕು.ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂಬ ಸುಳ್ಳು ಹೇಳಿಕೆ ನಿಲ್ಲಿಸಬೇಕು.
ಕರ್ನಾಟಕ ರಾಜ್ಯಕ್ಕೆ ಯೂರಿಯಾ ರಸಗೊಬ್ಬರವು 6.30 ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ನೀಡಿದೆ. ಅವಶ್ಯಕತೆಗಿಂತ ಹೆಚ್ಚಿಗೆ ಕೊಟ್ಟಿದ್ದು,ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಎಲ್ಲೋಯ್ತು ಎಂದು ಪ್ರಶ್ನಿಸಿದರು.
ನಮ್ಮ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಭಾವಿ ರಾಜಕಾರಣಿಗಳು ಬೇಕಾದಷ್ಟು ದಾಸ್ತಾನು ಇಟ್ಟುಕೊಂಡು 200ರಿಂದ 300 ರೂಪಾಯಿಗೆ ಸಿಗುವ ಗೊಬ್ಬರ 500 ರಿಂದ 600 ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರದಿಂದ ಬಂದ ರಸಗೊಬ್ಬರ ಸರಿಯಾಗಿ ಕೊಟ್ರೆ ರೈತರಿಗೆ ಸಾಲಾಗಿ ನಿಲ್ಲುವ ಪ್ರಶ್ನೆ ಬರೋದಿಲ್ಲ ಎಂದರು.
ಇನ್ನು ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ರೂ. ಅನುದಾನದಲ್ಲಿ ನಯಾಪೈಸೆ ಕೂಡ ರಾಜ್ಯದ ರೈತರಿಗೆ ತಲುಪಿಸದೆ ಲೂಟಿ ಹೊಡೆದಿದ್ದಾರೆ. ಕಳೆದ 2 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3,400ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಭೂ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನೀಡುವ ಪ್ರೋತ್ಸಾಹಧನವನ್ನು ನಿಲ್ಲಿಸಿದ್ದು, ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಕಿಡಿಕಾರಿದರು.
ಇದಲ್ಲದೆ ಹಾವೇರಿ ಮತ್ತು ರಾಣಿಬೆನ್ನೂರಿನಲ್ಲಿ ರಸಗೊಬ್ಬರ ಖರೀದಿಸಲು ಮುಂದಾಗಿದ್ದ ರೈತರಿಗೆ ಪೊಲೀಸರು ಲಾಟಿ ಚಾರ್ಜ್ ಮಾಡಿರುವುದನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಬಿಜೆಪಿ ಮುಖಂಡ ವೇಣು ಮಾಧವ ನಾಯಕ,ಹೆಚ್.ಸಿ. ಪಾಟೀಲ್, ವೇಣುಗೋಪಾಲ ಜೇವರ್ಗಿ,ಬಲಭೀಮ ನಾಯಕ ಬೈರಿಮಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಇತರರು ಇದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಸಗೊಬ್ಬರದ ಅಭಾವ ಉಂಟಾಗಿ ರೈತರು ಸಂಕಷ್ಟದಲ್ಲಿದ್ದು, ಕೃಷಿ ಸಚಿವರು ಮತ್ತು ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ರಸಗೊಬ್ಬರದ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ.
*ನರಸಿಂಹ ನಾಯಕ ರಾಜೂಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ
ವರದಿ: ಎನ್ ಎಮ್ ನದಾಫ್ ಯಾದಗಿರಿ