ಕೆ.ಎಂ ನಾಗರಾಜ್ ಅವರು ತಮ್ಮದೇ ಆದ ಟ್ರಸ್ಟ್ ಸ್ಥಾಪನೆ ಮಾಡುವ ಮೂಲಕ ಒಕ್ಕಲಿಗ ಸಮಾಜಕ್ಕೆ ಸೇರಿದ ಹಳ್ಳಿಕಾರ್ ಜನಾಂಗದ ಅಭಿವೃದ್ಧಿಗೆ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ನಾಯಕರನ್ನು ತಯಾರು ಮಾಡಿದ ಫ್ಯಾಕ್ಟರಿಯ ಮಾಲೀಕರು ಯಾರಂದರೆ ಅದು ಕೆ.ಎಂ. ನಾಗರಾಜರವರು. ಇದಕ್ಕೆ ನಾನೇ ಸಾಕ್ಷಿ.
1983, 1985 ಹಾಗೂ 1989ರಲ್ಲಿ ಟಿಕೆಟ್ ಸಂದರ್ಭದಲ್ಲಿ ಎಲ್ಲಾ ಸಮುದಾಯ ಹಾಗೂ ಧರ್ಮಕ್ಕೆ ಸೇರಿದ ನಾಯಕರನ್ನು ಬೆಂಗಳೂರಿನಲ್ಲಿ ತಯಾರು ಮಾಡಿದರು.
ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೆ.ಎಂ. ನಾಗರಾಜ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಚರ್ಚೆ ಆಯಿತು. ನನಗೆ ಪರಿಷತ್ ಸದಸ್ಯ ಸ್ಥಾನ ಬೇಡ ಆ ಸ್ಥಾನಕ್ಕೆ ಪ್ರೇಮಚಂದ್ರ ಸಾಗರ್ ಅವರನ್ನು ಆಯ್ಕೆ ಮಾಡಿ ಎಂದು ತಮ್ಮ ಸ್ಥಾನ ತ್ಯಾಗ ಮಾಡಿದ ತ್ಯಾಗಜೀವಿ ನಾಗರಾಜ್ ಅವರು.
ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ನಾಗರಾಜ್ ಅವರಿಗೆ ಬಸವನಗುಡಿ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಅವರ ಆರೋಗ್ಯ ಸರಿ ಇಲ್ಲದ ಕಾರಣ, ಅವರ ಜೊತೆ ಚರ್ಚೆ ಮಾಡಿದೆ. ಆಗ ಅವರು ಮಾಜಿ ಮೇಯರ್ ಆಗಿದ್ದ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡುವಂತೆ ತಿಳಿಸಿದರು. ಸಾಮಾನ್ಯ ವರ್ಗಕ್ಕೆ ಸೇರಿದ ಕ್ಷೇತ್ರದಲ್ಲಿ ದಲಿತ ಮುಖಂಡನಿಗೆ ಸೀಟು ಬಿಟ್ಟುಕೊಟ್ಟು ಚಂದ್ರಶೇಖರ್ ಅವರನ್ನು ಬಸವನಗುಡಿಯಲ್ಲಿ ಶಾಸಕರನ್ನಾಗಿ ಮಾಡಿದರು.
ಕೆ.ಎಂ. ನಾಗರಾಜ್ ತಮ್ಮ ಬದುಕಿನಲ್ಲಿ ತ್ಯಾಗ ಮಾಡಿಕೊಂಡೇ ಜೀವನ ಕಳೆದಿದ್ದಾರೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ, ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಇಂದು ನಿಮ್ಮನ್ನೆಲ್ಲ ಸೇರಿಸಿ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ದೇವರು ವರವನ್ನು ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ, ಕೇವಲ ಅವಕಾಶ ನೀಡುತ್ತಾನೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಕೆ.ಎಂ. ನಾಗರಾಜ್ ಅವರು ತಮಗೆ ಸಿಕ್ಕ ಅವಕಾಶದಲ್ಲಿ ವಿದ್ಯಾರ್ಥಿಗಳ ಬದುಕಿಗೆ ಭದ್ರ ಅಡಿಪಾಯ ಹಾಕಲು ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಪರವಾಗಿ, ಆಪ್ತಸ್ನೇಹಿತ ಹಾಗೂ ಶಿಷ್ಯನಾಗಿ ಅವರಿಗೆ ಉತ್ತಮ ಆರೋಗ್ಯ ಸಿಗಲಿ, ಹೆಚ್ಚಿನ ಸೇವೆ ಮಾಡುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತೆವೆ.
ನಾವು ಲಕ್ಷ್ಮಿ ಫೋಟೋ ಪೂಜೆ ಮಾಡಿದಾಕ್ಷಣ ಹಣ ಸಿಗುವುದಿಲ್ಲ. ಗಣಪತಿ ಫೋಟೋಗೆ ಪೂಜೆ ಮಾಡಿದಾಕ್ಷಣ ವಿಘ್ನ ನಿವಾರಣೆ ಆಗುವುದಿಲ್ಲ, ಸರಸ್ವತಿ ಫೋಟೋ ಪೂಜೆ ಮಾಡಿದಾಕ್ಷಣ ವಿದ್ಯೆ ಸಿಗುವುದಿಲ್ಲ. ನಾವು ಶ್ರಮ ಪಟ್ಟಾಗ ಮಾತ್ರ ಪ್ರತಿಫಲ ಸಿಗುತ್ತದೆ. ಮಕ್ಕಳು ತಮ್ಮ ವಿದ್ಯಾಭ್ಯಾಸ ಸಮಯದಲ್ಲಿ ಓದಿಗೆ ಹೆಚ್ಚು ಸಮಯ ನೀಡಿದಾಗ ಅವರು ಯಶಸ್ಸು ಸಾಧಿಸಲು ಸಾಧ್ಯ. ಮಕ್ಕಳು ಚೆನ್ನಾಗಿ ಬದುಕಿದರೆ ಪೋಷಕರು ಸಂತೋಷ ಪಡುತ್ತಾರೆ.
ಈ ಸಮುದಾಯ ಜನ ವ್ಯವಸಾಯದಿಂದ ಬಂದವರು. ನೀವು ಏನು ಬೇಕಾದರೂ ಆಗಬಹುದು.
ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು. ಅದಕ್ಕಾಗಿ ನಾವು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ.
ಮಕ್ಕಳು ತಪ್ಪು ಮಾಡಿದಾಗ ತಿದ್ದಲು ಅನುಕೂಲ ಆಗಲಿ ಎಂದು ಪೆನ್ಸಿಲ್ ನೀಡುತ್ತಾರೆ. ಹಾಗೆ ಮಕ್ಕಳ ವಯಸ್ಸಿನಲ್ಲೇ ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.
ನೀವು ಪ್ರಾಯಕ್ಕೆ ಬರುತ್ತಿದ್ದಂತೆ ನಿಮ್ಮ ಮೇಲೆ ಜವಾಬ್ದಾರಿ ಬರುತ್ತದೆ. ನಿಮ್ಮ ಪೋಷಕರು ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮ್ಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ನೀವು ಆ ನಂಬಿಕೆ ಉಳಿಸಿಕೊಳ್ಳಿ.
ನಿಮ್ಮ ಜೀವನದಲ್ಲಿ ನಾಲ್ಕು Dಗಳನ್ನು ಇಟ್ಟುಕೊಳ್ಳಬೇಕು. ಕನಸು (Dream), ಕನಸು ನನಸಾಗಿಸಿಕೊಳ್ಳುವ Desire, ಕನಸು ನನಸಾಗಿಸಲು Dedication ಹಾಗೂ Discipline.
ನಾನು ಕೃಷ್ಣ ಅವರ ಕಾಲದಲ್ಲಿ ಸಚಿವನಾಗಿದ್ದಾಗ ಫ್ರಾನ್ಸ್ ದೇಶಕ್ಕೆ ಹೋಗಿದ್ದೆ. ಅಲ್ಲಿ ಕಾರ್ಯಕ್ರಮ ನಡೆಯುವ ದಿನ ನನ್ನ ಜನ್ಮದಿನವಾಗಿತ್ತು. ಆಗ ಕಾರ್ಯಕ್ರಮದಲ್ಲಿ ನನ್ನನ್ನು ಪರಿಚಯಿಸಿ ನನ್ನ ಜನ್ಮದಿನ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಲು ಮುಂದಾದರು. ಆಗ ಅಲ್ಲಿ ಕ್ಯಾಂಡಲ್ ಆರಿಸಲು ಹೇಳಿದರು. ನಾನು ಮುಜುಗರಕ್ಕೆ ಒಳಗಾಗಿದ್ದೆ. ಆಗ ಕ್ಯಾಂಡಲ್ ಹಚ್ಚಿ ಆರಿಸಲು ಮುಂದಾದಾಗ, ಹಿಂದೆ ಕೂತಿದ್ದ ವ್ಯಕ್ತಿ ತಡೆದ. ದೀಪ ಹಚ್ಚುವುದು ಭಾರತದ ಸಂಸ್ಕೃತಿಯೇ ಹೊರತು, ದೀಪ ಆರಿಸುವುದಲ್ಲ ಎಂದು ಆತ ಹೇಳಿದ. ಇಂದು ಇಲ್ಲಿ ಹಚ್ಚಿರುವ ದೀಪ, “ಶುಭಂ ಕರೋತಿ ಕಲ್ಯಾಣಂ ಆರೋಗ್ಯ, ಧನ, ಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ!” ಎಂಬ ಶ್ಲೋಕದಂತೆ ನಿಮಗೆ ಮಂಗಳವಾಗಲಿ, ನೀವು ಆರೋಗ್ಯವಂತರಾಗಲಿ ಎಂದು ಶುಭ ಹಾರೈಸುತ್ತೇನೆ.