ರಷ್ಯಾ – ಉಕ್ರೇನ್ ಗಡಿಯಲ್ಲಿನ ದೊನೆಸ್ಟಕ್‌ನಲ್ಲಿ ಉಕ್ರೇನ್ ಕೈಗೊಂಡ ಡ್ರೋನ್ ದಾಳಿಯಲ್ಲಿ ಭಾರತೀಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು 23 ವರ್ಷದ ಗುಜರಾತ್‌ನ ಹೆಮಿಲ್ ಅಶ್ವಿನ್‌ಭಾಯ್ ಮಂಗುಕಿಯಾ ಎಂದು ಗುರುತಿಸಲಾಗಿದೆ. ಹೆಮಿಲ್ ಅವರು ರಷ್ಯಾ ಸೇನೆಯ ಭದ್ರತಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು,ಫೆ.21ರಂದು ಮೃತಪಟ್ಟಿದ್ದಾರೆ.
ಗುಜರಾತ್‌ನ ಸೂರತ್ ಜಿಲ್ಲೆಯ ನಿವಾಸಿಯಾಗಿರುವ ಮಾಂಗುಕಿಯಾ ಅವರು ರಷ್ಯಾ ಸೇನೆಗೆ ಡಿಸೆಂಬರ್ 2023ರಲ್ಲಿ ನೇಮಕವಾಗಿದ್ದರು. ಈ ತಿಂಗಳ ಆರಂಭದಲ್ಲಿ ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಹೆಮಿಲ್ ತಂದೆ ಸಹಾಯಕರೊಬ್ಬರ ಮೂಲಕ ಇಮೇಲ್ ಮಾಡಿ ತಮ್ಮ ಪುತ್ರನನ್ನು ಶೀಘ್ರ ಭಾರತಕ್ಕೆ ವಾಪಸ್ ಕರೆಸಬೇಕೆಂದು ಕೋರಿದ್ದರು.
ವರದಿಗಳ ಪ್ರಕಾರ ರಷ್ಯಾ ಸೇನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಅಸಂಖ್ಯಾತ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದು, ಸ್ವದೇಶಕ್ಕೆ ಮರಳಲು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುತ್ತಿದ್ದಾರೆ.
ಮಾಂಗುಕಿಯಾ ಅವರ ತಂದೆ ಅಶ್ವಿನ್‌ಭಾಯಿ ಅವರು ಫೆ.20 ರಂದು ತಮ್ಮ ಪುತ್ರನ ಜೊತೆ ಕೊನೆಯದಾಗಿ ಮಾತನಾಡಿದ್ದರು.
ರಷ್ಯದಲ್ಲಿ ಮಾಂಗುಕಿಯಾ ಜೊತೆ ಕೆಲಸ ಮಾಡುತ್ತಿದ್ದ ಕರ್ನಾಟಕದ ಕಲಬುರಗಿ ನಿವಾಸಿ ಸಮೀರ್ ಅಹಮದ್ ದುರಂತದ ಬಗ್ಗೆ ಮಾತನಾಡಿ, “ನಮ್ಮ ಮೇಲೆ ಹೋಗುತ್ತಿದ್ದ ಡ್ರೋನ್‌ಅನ್ನು ನಾವು ನೋಡಿದೆವು. ನಾನು ಕಂದಕಗಳನ್ನು ಅಗೆಯುತ್ತಿದೆ, 150 ಮೀಟರ್ ದೂರದಲ್ಲಿದ್ದ ಹೆಮಿಲ್ ಗುಂಡು ಹೊಡೆಯುವುದನ್ನು ಅಭ್ಯಾಸ ಮಾಡುತ್ತಿದ್ದ. ಇದ್ದಕ್ಕಿಂದ್ದಂತೆ ಕೆಲವು ಶಬ್ದಗಳನ್ನು ಕೇಳಿಸಿಕೊಂಡೆವು. ನಾನು ಮತ್ತು ಇಬ್ಬರು ಭಾರತೀಯರು ರಷ್ಯಾದ ಸೈನಿಕರೊಂದಿಗೆ ಕಂದಕದಲ್ಲಿ ಬಚ್ಚಿಟ್ಟುಕೊಂಡೆವು. ಕ್ಷಿಪಣಿಗಳು ಭೂಮಿಯ ಮೇಲೆ ಬಿದ್ದ ರಬಸಕ್ಕೆ ಭೂಮಿ ನಡುಗಿತು. ಕೆಲವು ಸಮಯದ ನಂತರ ನಾವು ಸ್ಥಳದಿಂದ ತೆರಳಿದೆವು. ಅಷ್ಟರಲ್ಲಾಗಲೇ ಹೆಮಿಲ್ ಮೃತನಾಗಿದ್ದ. ಆತನ ಮೃತದೇಹವನ್ನು ನಾನೆ ಟ್ರಕ್‌ನೊಳಗೆ ಸಾಗಿಸಿದೆ” ಎಂದು ಹೇಳಿದರು.
ಭಾರತಕ್ಕೆ ತೆರಳುನ ನಮ್ಮ ಮನವಿಗಳನ್ನು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಮೀರ್ ಅಹಮದ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಷ್ಯಾದಲ್ಲಿ ಕೆಲಸ ಮಾಡುತ್ತಿರುವ ಹಲವು ಭಾರತೀಯ ಕಾರ್ಮಿಕರು ಸ್ವದೇಶಕ್ಕೆ ತೆರಳಲು ಭಾರತೀಯ ರಾಯಭಾರಿ ಕಚೇರಿಯ ನೆರವು ಕೋರಿದ್ದಾರೆ. ಮೃತ ಹೆಮಿಲ್ ತಂದೆ ಕೂಡ ಭಾರತೀಯ ಧೂತವಾಸ ಕಚೇರಿಗೆ ಫೆ.02ರಂದು ಪತ್ರ ಬರೆದು ತಮ್ಮ ಪುತ್ರ ಅಪಾಯದ ಸ್ಥಳದಲ್ಲಿದ್ದು,ಭಾರತಕ್ಕೆ ಮರಳಲು ಮಧ್ಯಸ್ಥಿಕೆ ವಹಿಸಬೇಕೆಂದು ಇಮೇಲ್ ಮಾಡಿದ್ದರು.
ವರದಿಗಳ ಪ್ರಕಾರ ಭಾರತ ಸರ್ಕಾರ ಕೂಡ ಯುದ್ಧದಲ್ಲಿ ಭಾಗವಹಿಸಿರುವುದನ್ನು ತಡೆಯಲು ರಷ್ಯಾಕ್ಕೆ ಮನವಿ ಮಾಡಿದೆ. ಯುದ್ಧದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೈನಿಕರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕೇಳಿಕೊಂಡ ಭಾರತದ ಮನವಿ ರಷ್ಯಾ ಸರ್ಕಾರಕ್ಕೆ ತಲುಪಿದೆ ಎನ್ನಲಾಗಿದೆ.