ತಾನೇ ಕಟ್ಟಿ ಬೆಳೆಸಿದ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಹೊರನಡೆದ ವಿಜಯ್‌ ಶೇಖರ್‌ ಶರ್ಮಾ!

KTN Admin
2 Min Read

​​ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ತನ್ನ ಪ್ರಮುಖ ವ್ಯವಹಾರಗಳನ್ನು ಮಾರ್ಚ್ 15ರ ಬಳಿಕ ಸ್ಥಗಿತಗೊಳಿಸುವಂತೆ ಆರ್‌ಬಿಐ ಸೂಚನೆ ನೀಡಿದೆ. ಇದರ ನಡುವೆ ವಿಜಯ್‌ ಶೇಖರ್‌ ಶರ್ಮಾ ಅವರು ಕಂಪನಿಯಿಂದ ಹೊರಬಂದಿದ್ದಾರೆ. ​​ಅವರು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು. ಎರಡೂ ಹುದ್ದೆಗಳಿಗೆ ಅವರು ರಾಜೀನಾಮೆ ನೀಡಿದ್ದಾರೆ.

  • ಹೈಲೈಟ್ಸ್‌:
    ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಪ್ರಮುಖ ವ್ಯವಹಾರಗಳನ್ನು ಮಾರ್ಚ್ 15ರ ಬಳಿಕ ಸ್ಥಗಿತಗೊಳಿಸುವಂತೆ ಆರ್‌ಬಿಐ ಸೂಚನೆ
    ಇದರ ನಡುವೆ ತಮ್ಮದೇ ಕಂಪನಿಯಿಂದ ಹೊರನಡೆದಿದ್ದಾರೆ ವಿಜಯ್‌ ಶೇಖರ್‌ ಶರ್ಮಾ, ಎರಡೂ ಹುದ್ದೆಗಳಿಗೆ ರಾಜೀನಾಮೆ
    ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ಶರ್ಮಾ

ಹೊಸದಿಲ್ಲಿ: ಪೇಟಿಎಂ ಸಂಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ ಅವರು ತಾವೇ ಕಟ್ಟಿ ಬೆಳೆಸಿದ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ (ಪಿಪಿಬಿಎಲ್‌)ನಿಂದ ಹೊರನಡೆದಿದ್ದಾರೆ.

ಅವರು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ನಿರ್ದೇಶಕ ಸ್ಥಾನವನ್ನು ನಿರ್ವಹಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಭಾರತೀಯ ರಿಸರ್ವ್‌ ಬ್ಯಾಂಕ್ ಪೇಟಿಎಂ ಬ್ಯಾಂಕ್‌ಗೆ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಇದಾದ ಬೆನ್ನಲ್ಲೇ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ತನ್ನ ಪ್ರಮುಖ ವ್ಯವಹಾರಗಳನ್ನು ಮಾರ್ಚ್ 15ರ ಬಳಿಕ ಸ್ಥಗಿತಗೊಳಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚನೆ ನೀಡಿದೆ. ಈ ಗಡುವಿಗೆ ಮುಂಚಿತವಾಗಿಯೇ ವಿಜಯ್‌ ಶೇಖರ್‌ ಶರ್ಮಾ ಅವರು ಕಂಪನಿಯ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

 

ಮಾಜಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧ್ಯಕ್ಷ ಶ್ರೀನಿವಾಸನ್‌ ಶ್ರೀಧರ್‌, ನಿವೃತ್ತ ಐಎಎಸ್‌ ಅಧಿಕಾರಿ ದೇವೇಂದ್ರನಾಥ್‌ ಸಾರಂಗಿ, ಬ್ಯಾಂಕ್‌ ಆಫ್‌ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್‌ ಕುಮಾರ್‌ ಗಾರ್ಗ್‌ ಮತ್ತು ಮಾಜಿ ಐಎಎಸ್‌ ಅಧಿಕಾರಿ ರಜನಿ ಸೆಖ್ರಿ ಸಿಬಲ್‌ ಅವರ ನೇಮಕದೊಂದಿಗೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿ. ತನ್ನ ನಿರ್ದೇಶಕರ ಮಂಡಳಿಯನ್ನು ಪುನರ್‌ ರಚಿಸಿದೆ.

ಈ ಪರಿವರ್ತನೆಯನ್ನು ಸರಾಗಗೊಳಿಸಲು ವಿಜಯ್‌ ಶೇಖರ್‌ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಪೇಟಿಎಂ ಅನ್ನು ಅದರ ಪೇಮೆಂಟ್ಸ್‌ ಬ್ಯಾಂಕ್‌ ಘಟಕದಿಂದ ಬೇರ್ಪಡಿಸುವ ಮತ್ತು ಅದನ್ನು ಸ್ವತಂತ್ರ ಘಟಕವಾಗಿ ಇರಿಸುವ ಪ್ರಯತ್ನದ ಭಾಗವಾಗಿಯೂ ಅವತು ಈ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಹೇಳಿದೆ.

ಈ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ವಿಜಯ್‌ ಶೇಖರ್‌ ಶರ್ಮಾ ಅವರು ಬರೋಬ್ಬರಿ ಶೇ. 51ರಷ್ಟು ಪಾಲನ್ನು ಹೊಂದಿದ್ದಾರೆ. ಉಳಿದ ಪಾಲನ್ನು ಪೇಟಿಎಂ ಮೂಲ ಕಂಪನಿ ಒನ್‌97 ಕಮ್ಯುನಿಕೇಶನ್ಸ್‌ ಲಿ. ಹೊಂದಿದೆ.

ಒನ್‌ 97 ಕಮ್ಯುನಿಕೇಷನ್ಸ್‌ ತನ್ನ ನಾಮಿನಿಯನ್ನು ತೆಗೆದುಹಾಕುವ ಮೂಲಕ ಕೇವಲ ಸ್ವತಂತ್ರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರನ್ನು ಹೊಂದಿರುವ ಮಂಡಳಿಯನ್ನು ಆಯ್ಕೆ ಮಾಡುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿ.ನ ಕ್ರಮವನ್ನು ಬೆಂಬಲಿಸುವುದಾಗಿ ತಿಳಿಸಿದೆ. “ಪಿಪಿಬಿಎಲ್‌ನ ಭವಿಷ್ಯದ ವ್ಯವಹಾರವನ್ನು ಪುನರ್‌ ರಚಿಸಲಾದ ಮಂಡಳಿಯು ಮುನ್ನಡೆಸುತ್ತದೆ,” ಎಂದು ಷೇರುಪೇಟೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ಒನ್‌ 97 ಕಮ್ಯುನಿಕೇಷನ್ಸ್‌ ತಿಳಿಸಿದೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ