ಯಡ್ರಾಮಿ: ತಾಲ್ಲೂಕಿನ ಮಳ್ಳಿ ಗ್ರಾಮದ ದಾವಲಸಾಬ್ ಗೋಲಗೇರಿ ಅವರ ಎತ್ತುಗಳು 10 ಗಂಟೆಗಳ ಅವಧಿಯಲ್ಲಿ 21 ಎಕರೆ ಹೊಲ ಹರಗಿ ಸಾಧನೆ ತೋರಿವೆ.
ರಾಜೇಸಾಬ ಮನಿಯಾರ್ ಎಂಬವರ ಹತ್ತಿ ಬಿತ್ತನೆ ಮಾಡಿದ ಹೊಲದಲ್ಲಿ ಹತ್ತಿ, ತೂಗರಿ ಬೆಳೆ ಸಾಲಿನ ಮಧ್ಯದಲ್ಲಿ ಹರಗುವ ಮೂಲಕ ದಾವಲಸಾಬ್ ಗೋಲಗೇರಿ ಅವರ ಎತ್ತುಗಳು ಈ ಸಾಧನೆ ಮಾಡಿವೆ.
ಎತ್ತುಗಳು 21 ಎಕರೆ ಹೊಲವನ್ನು 10ಗಂಟೆ ಅವಧಿಯಲ್ಲಿ ಹರಗುವ ಮೂಲಕ ಸಾಧನೆ ಮಾಡಿದ ಎತ್ತುಗಳನ್ನು, ಎತ್ತಿನ ಗಾಡಿ ಹೂಡಿಕೊಂಡು ಮಳ್ಳಿ ಗ್ರಾಮದ ಚೌಡೇಶ್ವರಿ ದೇವಿಯ ದರ್ಶನ ಪಡೆದು ದಾವಲಸಾಬ್ ಗೋಲಗೇರಿ, ನಂತರ ಮಳ್ಳಿ ಗ್ರಾಮದಲ್ಲಿ ಬಾಜಾ ಭಜಂತ್ರಿ ಮೂಲಕ ಎತ್ತುಗಳು ಬಸವೇಶ್ವರ ದೇವಾಲಯದ ವರೆಗೆ ಮೆರವಣಿಗೆ ನಡೆಸಲಾಯಿತು.
ನಮ್ಮ ಎತ್ತುಗಳು ಸಭ್ಯತೆಯೊಂದಿಗೆ ಈ ರೀತಿ ದಾಖಲೆ ಮಾಡಿದ್ದು ಬಹಳ ವಿಶೇಷವೆನಿಸಿದೆ. ನಾವು ಇಲ್ಲಿಯ ವರೆಗೆ ಈ ರೀತಿಯ ಹೆಚ್ಚಿನ ಸಾಧನೆ ನೋಡಿದ್ದಿಲ್ಲ. ಇಂತಹ ಎತ್ತುಗಳು ಇದ್ರ ಯಾವ ಟ್ರ್ಯಾಕ್ಟರ್ ಯಾಕ ಬೇಕು ಎಂದು ದಾವಲಸಾಬ್ ಗೋಲಗೇರಿ ರೈತರು ಹೇಳಿದ್ದಾರೆ.
ರೈತರಾದ ನಿಂಗಪ್ಪ ರಾಯನಮನಿ, ಸಿದ್ದಪ್ಪ ಯಂಕಂಚಿ, ರಾಜೇಸಾಬ ಮನಿಯಾರ, ಶ್ರೀಶೈಲ ಕೆಂಭಾವಿ, ಪರಸಪ್ಪ ಕೆಂಬಾವಿ, ದೇವಪ್ಪ ನೆಡಗಿ, ಮಂತಪ್ಪ ಕೆಂಭಾವಿ, ಕೇದರಲಿಂಗ ಕೆಂಭಾವಿ ಇದ್ದರು.