ಬಜೆಟ್ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಲು ಜೆಡಿಎಸ-ಬಿಜೆಪಿ ಸಭೆ

KTN Admin
2 Min Read

ಕೆಲ ದಿನಗಳಲ್ಲೇ ರಾಜ್ಯದಲ್ಲಿ ಅಧಿವೇಶನ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಭೆ ನಡೆಸಿ, ತಮ್ಮ ಹೋರಾಟದ ಕುರಿತಂತೆ ಚರ್ಚೆ ನಡೆಸಿದರು.

ಬೆಂಗಳೂರು: ಮಾರ್ಚ್‌ 3ರಿಂದ ನಡೆಯುವ ವಿಧಾನಮಂಡಲದ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಸದನದಲ್ಲಿ ನಡೆಸಬೇಕಾದ ಹೋರಾಟಕ್ಕೆ ಸಂಬಂಧಪಟ್ಟಂತೆ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆ ನಡೆದಿದ್ದು, ಸರಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ನಿರ್ಧರಿಸಲಾಗಿದೆ.

ಅಲ್ಲದೆ ಕೆಪಿಎಸ್‌ಸಿ, ಬಾಣಂತಿಯರ ಸಾವು, ಮೈಕ್ರೋಫೈನಾನ್ಸ್‌ ಸೇರಿ ಹಲವು ವಿಷಯಗಳ ಬಗ್ಗೆ ಸರಕಾರದ ವಿರುದ್ಧ ಮುಗಿ ಬೀಳಲು ಮುಂದಾಗಿದೆ ಎನ್ನಲಾಗಿದೆ. ವಿಪಕ್ಷ ನಾಯಕ ಆರ್‌. ಅಶೋಕ್‌, ಉಪನಾಯಕ ಅರವಿಂದ ಬೆಲ್ಲದ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಬಳಿಕ ಆರ್‌. ಅಶೋಕ್‌ ಸುದ್ದಿಗಾರರೊಂದಿಗೆ ಮಾತನಾಡಿ, 2 ವರ್ಷಗಳ ಸರಕಾರದ ಅವಧಿಯಲ್ಲಿ ಕೊಮು ಗಲಭೆ ಹೆಚ್ಚುತ್ತಿದೆ. ಕೆಪಿಎಸ್‌ಸಿ ಹೆಸರಲ್ಲಿ ಎಸಿ, ತಹಶೀಲ್ದಾರರು ಆರಂಭದಲ್ಲೇ ಕೋಟಿಕೋಟಿ ಲಂಚ ಕೊಟ್ಟು ಹೋಗುವಂತಹ ಪರಿಸ್ಥಿತಿಗೆ ದೂಡಿದ್ದಾರೆ. 100 ಅಂಕದ ಪ್ರಶ್ನೆಗಳಲ್ಲಿ ಕನ್ನಡ ಪ್ರಶ್ನೆಗಳೇ ತಪ್ಪಾಗಿವೆ. ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಶೇ. 75ರಷ್ಟು ಪ್ರಶ್ನೆಗಳು ಕನ್ನಡದಲ್ಲಿ ಇರುವುದಿಲ್ಲ. ಅಭಿವೃದ್ಧಿ ಶೂನ್ಯ ಸರಕಾರದಲ್ಲಿ ಬಾಣಂತಿಯರ ಸಾವು ಮುಂದುವರಿದಿದೆ ಎಂದು ಆರೋಪಿಸಿದರು.

ಸರಿ ಹೋಗುತ್ತದೆ:
ಬಿಜೆಪಿಯಲ್ಲಿನ ಭಿನ್ನಮತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್‌, ರಾಜ್ಯಾಧ್ಯಕ್ಷರ ಘೋಷಣೆ ಆದ ಮೇಲೆ ಎಲ್ಲವೂ ಸರಿ ಹೋಗಲಿದೆ. ಸ್ವಲ್ಪ ಅತಿರೇಕಕ್ಕೆ ಹೋಗಿರಬಹುದು. ಆದರೆ ಎಲ್ಲವೂ ಸರಿ ಹೋಗಲಿದೆ ಎಂದರು.

ಸಭೆಗೆ ಬಂದ ವಿಜಯೇಂದ್ರ:
ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲು ಬೆಂಗಳೂರು ಶಾಸಕರ ಜತೆಗೆ ಸಭೆ ನಡೆಸಿದ ಬಿ.ವೈ. ವಿಜಯೇಂದ್ರ ತಡವಾಗಿ ಸಮನ್ವಯ ಸಮಿತಿ ಸಭೆಗೆ ಆಗಮಿಸಿದರು. ಮುನಿರತ್ನ, ವಿಶ್ವನಾಥ್‌, ಬೈರತಿ ಬಸವರಾಜ್‌, ಪಿ.ಸಿ. ಮೋಹನ್‌ ಜತೆಗಿದ್ದರು.

ಕೆಂಪೇಗೌಡರ ಹೆಸರು ನಾಶ: ಎಚ್‌ಡಿಕೆ
ಗ್ರೇಟರ್‌ ಬೆಂಗಳೂರು ಹೆಸರಿನಲ್ಲಿ ಕೆಂಪೇಗೌಡರ ಹೆಸರು ನಾಶ ಮಾಡಲು ಹೊರಟಿದ್ದಾರೆ ಎಂದು ಸಭೆ ಬಳಿಕ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿವೇಶನದಲ್ಲಿ ಯಾವೆಲ್ಲ ವಿಚಾರಗಳನ್ನು ಹೆಚ್ಚು ಚರ್ಚೆಗೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಸಭೆಯಲ್ಲಿ ಪ್ರಸ್ತಾವವಾಗಿದೆ. ಮೈಕ್ರೋ ಫೈನಾನ್ಸ್‌ ಅಧ್ಯಾದೇಶದ ಬಳಿಕವೂ ಆತ್ಮಹತ್ಯೆ ಮುಂದುವರಿದಿದೆ ಎಂದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ