ಯತ್ನಾಳ್ ಅಲ್ಲದೇ ಜೆಪಿಯಿಂದ ಇನ್ನೂ ಕೆಲವರಿಗೂ ನೋಟೀಸ್ ಜಾರಿ..!!! ಶೀಘ್ರದಲ್ಲಿಯೇ ಪ್ರಾದೇಶಿಕ ಪಕ್ಷ…?

ಚೇತನ ಕೆಂದೂಳಿ

Vjp Desk
4 Min Read

ರಾಜ್ಯ ಸುದ್ದಿ

ಬೆಂಗಳೂರು 02:

ಕಡೆಗೂ ಅಳೆದೂ ಸುರಿದೂ ಬಿಜೆಪಿ ಹೈಕಮಾಂಡ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದೆ. ಇಂತಹ ಉಚ್ಛಾಟನೆಗಳು ಹೊಸದೇನಲ್ಲ. ಬಿಜೆಪಿಗೂ ಯತ್ನಾಳ್ ಅವರಿಗೂ ಅಭ್ಯಾಸ ಆಗಿ ಹೋಗಿದೆ.

ಹಾಗೆಯೇ ಇದು ಅನಿರೀಕ್ಷಿತವೂ ಅಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ಕೆಲವು ನಾಯಕರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದರೂ ಈ ವಿವಾದಕ್ಕೆ ಮೂಲದಲ್ಲೇ ಮದ್ದು ಕಂಡು ಹಿಡಿಯುವಲ್ಲಿ ಬಿಜೆಪಿ ವರಿಷ್ಠರು ಆಸಕ್ತಿ ತೋರದೇ ವಿವಾದವನ್ನು ಸುದೀರ್ಘ ಅವಧಿಗೆ ಬೆಳೆಯಲು ಬಿಟ್ಟಿದ್ದೇ ಇದೊಂದು ಕಗ್ಗಂಟಾಗಲು ಕಾರಣ.

ಈಗ ಉಚ್ಛಾಟನೆ ನಿರ್ಧಾರದೊಂದಿಗೆ ವಿವಾದದ ಒಂದು ಅಧ್ಯಾಯ ಮುಗಿದಿದೆ. ಇದರ ಜತೆ ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಬಹಿರಂಗವಾಗಿಯೇ ಸಹಾನುಭೂತಿ ತೋರುತ್ತಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರಿಗೆ ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವರಾದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಮತ್ತು ವಿಜಯೇಂದ್ರ ವಿರೋಧಿ ಗುಂಪಿನಲ್ಲಿದ್ದ ಶಾಸಕ ಹರೀಶ್ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಬಿಜೆಪಿಯ ಮಟ್ಟಿಗೆ ಇದೊಂದು ಪ್ರಹಸನ. ಯತ್ನಾಳ್ ಅವರ ವಿಚಾರವನ್ನೇ ತೆಗೆದುಕೊಂಡರೆ ಅವರಿಗೆ ಇಂತಹ ಶಿಸ್ತು ಕ್ರಮ ಹೊಸದೇನಲ್ಲ. ಹಾಗೆಯೇ ಇಂತಹ ಉಚ್ಛಾಟನೆ ನಿರ್ಧಾರಗಳು ಆರು ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲೇ ಅರ್ಧದಲ್ಲೇ ವಾಪಸು ಪಡೆದ ಉದಾಹರಣೆಗಳೂ ಬಿಜೆಪಿಯಲ್ಲಿವೆ. ಹಾಗಾಗಿ ಇದೊಂದು ಸಾಮಾನ್ಯ ಪ್ರಹಸನವಷ್ಟೆ. ಇದರಿಂದ ರಾಜ್ಯ ರಾಜಕಾರಣದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತದೆ ಎಂದೇನೂ ಹೇಳಲಾಗುವುದಿಲ್ಲ.

ಕುಟುಂಬದ ಪ್ರಾಬಲ್ಯವನ್ನು ಬಹಿರಂಗವಾಗಿ ಪ್ರತಿಭಟಿಸಲಾಗದ ಹಾಗೆಯೇ ಒಪ್ಪಿಕೊಳ್ಳಲೂ ಆಗದ ನಾಯಕರುಗಳ ಗುಂಪೊಂದೂ ಇದೆ. ಆದರೆ ಅವರು ಯಾರೂ ಯತ್ನಾಳ್ ಪರ ರಾಜಕೀಯವಾಗಿ ನಿಲ್ಲುವ ಸಾಧ್ಯತೆಗಳು ದೂರ. ಪಕ್ಷದೊಳಗೇ ಇದ್ದು ಅಸ್ತಿತ್ವ ಕಾಪಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬದ್ದರಾಗುವುದೇ ಹೆಚ್ಚು. ಇನ್ನು ಹಿಂದುತ್ವದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಾದೇಶಿಕ ಪಕ್ಷ ಕಟ್ಟಲು ಹೊರಟಿರುವ ಯತ್ನಾಳ್ ಅವರಿಗೆ ಬಿಜೆಪಿಯ ಮಾಜಿ ನಾಯಕ ಕೆ.ಎಸ್. ಈಶ್ವರಪ್ಪ ಅಡ್ಡಿಯಾಗಿದ್ದಾರೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಡಿದೆದ್ದು ಈಗಾಗಲೇ ತಮ್ಮದೇ ಆದ ಸಂಗೊಳ್ಳಿರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಿ ಹೋರಾಟಕ್ಕಿಳಿದಿರುವ ಅವರು ಉತ್ತರ ಕರ್ನಾಟಕದಲ್ಲಿ ಹಿಂದುಳಿದ ವರ್ಗಳ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದೇ ಹಿಂದುತ್ವದ ಸಿದ್ಧಾಂತವನ್ನೇ ಅವರು ತಮ್ಮ ಗುರಿಯಾಗಿಸಿಕೊಂಡಿರುವುದರಿಂದ ಅಲ್ಲೂ ಯತ್ನಾಳ್ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಜಾಸ್ತಿ.

ಜತೆಗೇ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದ , ಸಂದರ್ಭ ಒದಗಿ ಬಂದರೆ ವೈಯಕ್ತಿಕ ದಾಳಿಗೂ ಹಿಂಜರಿಯದ ಅವರ ಜತೆ ದೀರ್ಘಕಾಲದ ಸ್ನೇಹ ಮಾಡಲು ಅನೇಕ ರಾಜಕೀಯ ಮುಂಖಂಡರೂ ಹಿಂಜರಿಯುತ್ತಾರೆ . ಹಾಗೆ ನೋಡಿದರೆ ಬಿಜೆಪಿ ನಾಯಕರ ಪೈಕಿ ಈವರೆವಿಗೆ ಯತ್ನಾಳ್ ವಾಗ್ದಾಳಿಗೆ ಸಿಕ್ಕದೇ ಇರುವ ಪ್ರಮುಖ ಮುಖಂಡರ ಸಂಖ್ಯೆ ಕಡೆಮೆ ಎಂದೇ ಹೇಳಬಹುದು. ಭವಿಷ್ಯದಲ್ಲಿ ಮತ್ತೆ ಬಿಜೆಪಿಗೆ ಮರಳುವ ಆಕಾಂಕ್ಷೆ ಹೊತ್ತು ರಾಜಕೀಯವಾಗಿ ಸೂಕ್ಷ್ಮ ಹೆಜ್ಜೆಗಳನ್ನು ಇಡುತ್ತಿರುವ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ದಿಲ್ಲಿ ಬಿಜೆಪಿ ನಾಯಕರಿಗೆ ಮತ್ತು ಸಂಘ ಪರಿವಾರದ ಹಿರಿಯರಿಗೆ ಈಗಲೂ ಸಹಾನುಭೂತಿ ಇದೆ. ಪುತ್ರನ ರಾಜಕೀಯ ಭವಿಷ್ಯದ ಕಾರಣಕ್ಕೆ ಅವರು ಯಡಿಯೂರಪ್ಪನವರ ಜತೆ ಏನೇ ಕಿತ್ತಾಡಿಕೊಂಡಿದ್ದರೂ ಇಬ್ಬರೂ ನಾಯಕರ ನಡುವೆ ರಾಜಕಾಣ ಮೀರಿದ ಸ್ನೇಹ ಆತ್ಮೀಯ ಸಂಬಂಧಗಳು ಇವೆ. ಇದಲ್ಲದೇ ಬಿಜೆಪಿಗೂ ಹಿಂದುತ್ವದ ಸಿದ್ಧಾಂತವನ್ನು ಒಪ್ಪಿಕೊಂಡ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರೊಬ್ಬರ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅಹಿಂದ ವರ್ಗಗಳ ನಾಯಕರಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಸಾಧ್ಯತೆಗಳು ಇವೆ. ಅವರನ್ನು ಬಿಟ್ಟರೆ ಆ ಪಕ್ಷದಲ್ಲಿ ಅಹಿಂದ ಮತಗಳನ್ನು ಗಣನೀಯವಾಗಿ ಸೆಳೆಯುವ ಇತರ ಪ್ರಭಾವಿ ನಾಯಕರು ಇಲ್ಲ. ಹೀಗಾಗಿ ಸಿದ್ದರಾಮಯ್ಯ ಚುನಾವಣಾ ರಾಜಕಾರಣದಿಂದ ದೂರ ಸರಿದರೆ ಅದರ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ಈ ಪ್ರಯತ್ನಕ್ಕೆ ಈಶ್ವರಪ್ಪ ಅವರು ಒಂದು ಅಸ್ತ್ರವಾದರೂ ಆಶ್ಚರ್ಯವೇನಿಲ್ಲ. ರಾಜಕಾರಣ ಸಾಧ್ಯತೆಗಳ ಸಂತೆಯಾಗಿರುವುದರಿಂದ ಏನು ಬೇಕಾದರೂ ಆಗಬಹುದು.

ರಾಜಣ್ಣ ಪ್ರಕರಣ:

ಇನ್ನು ಕಾಂಗ್ರೆಸ್ ನಲ್ಲಿ ಸಚಿವ ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಪ್ರಯತ್ನ ಪ್ರಕರಣದ ಬಗ್ಗೆ ತನಿಖೆಯೇನೋ ಆರಂಭವಾಗಿದೆ. ಆದರೆ ಈ ಕುರಿತಂತೆ ತನ್ನ ಬಳಿ ಯಾವುದೇ ನಿಖರ ಸಾಕ್ಷಾಧಾರಗಳಿಲ್ಲ ಎಂದು ಅವರೇ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸದನದಲ್ಲಿ ಬಹಿರಂಗವಾಗಿ ಈ ವಿಚಾರ ಪ್ರಸ್ತಾಪಿಸಿದ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಅವರ ವಿರುದ್ಧ ಅಸಮಾಧಾನಗೊಂಡಿದೆ. ಈ ಪ್ರಕರಣ ಒಂದು ಕಡೆಯಾದರೆ ತನ್ನ ಕೊಲೆಗೆ ಬೆಂಗಳೂರಿನ ಪ್ರಮುಖ ರಾಜಕೀಯ ನಾಯಕರೊಬ್ಬರು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿ ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಪೊಲಿಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಆರು ತಿಂಗಳ ಬಳಿಕ ಅವರು ದೂರು ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ಆಧರಿಸಿ ಕೆಲವರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆಂತರಿಕ ಕಿತ್ತಾಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೂ ಕೂಡಾ ಅದರ ಮುಂದುವರಿದ ಭಾಗ ಎಂಬಂತೆ ಗೋಚರವಾಗುತ್ತಿದೆ. ಈ ಬೆಳವಣಿಗೆಗಳು ಒಂದು ಕಡೆಯಾದರೆ ತನ್ನನ್ನು ಮೂಲೆ ಗುಂಪು ಮಾಡುವ ಪ್ರಯತ್ನಗಳ ವಿರುದ್ಧ ಸಿಡಿದು ನಿಂತಿರುವ ಉಪ ಮುಖ್ಯಮಂತ್ರಿ, ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಸುದೀರ್ಘ ವಿವರಗಳುಳ್ಳ ದೂರು ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಇಬ್ಬರು ನಾಯರ ನಡುವಿನ ಕಿತ್ತಾಟದಿಂದ ಭವಿಷ್ಯದಲ್ಲಿ ಉಂಟಾಗಲಿರುವ ಸಮಸ್ಯೆಗೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯ ಸಂಧಾನ ಸೂತ್ರಗಳನ್ನು ರೂಪಿಸುತ್ತದೆ ಎಂಬುದೇ ಈಗ ಉಳಿದಿರುವ ಕುತೂಹಲ.

ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಸಮೀಕರಣದ ಮಾತು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿದೆ. ಅದು ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕು.

Share This Article