ಸರಕಾರದ ಕ್ರಮ ಜನವಿರೋಧಿ, ಬಡವರ ವಿರೋಧಿ ನಿರ್ಧಾರ ಅಲ್ಲವೇ?: ಎನ್.ರವಿಕುಮಾರ್ ಪ್ರಶ್ನೆ

YDL NEWS
2 Min Read

ಬೆಂಗಳೂರು: ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರಕಾರದ ಕ್ರಮವು ಜನವಿರೋಧಿ, ಬಡವರ ವಿರೋಧಿ ನಿರ್ಧಾರವಲ್ಲವೇ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಔಷಧಿಗಳು ಕಡಿಮೆ ವೆಚ್ಚದಲ್ಲಿ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರವು ಜನೌಷಧಿ ಕೇಂದ್ರಗಳನ್ನು ತೆರೆದಿದೆ. ದೇಶಾದ್ಯಂತ 15 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ಕರ್ನಾಟಕ ರಾಜ್ಯದಲ್ಲಿ 1,541 ಕೇಂದ್ರಗಳಿವೆ. 207 ಸರಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಸರಕಾರ ಮುಚ್ಚುತ್ತಿದೆ ಎಂದು ವಿವರಿಸಿದರು.

ನಾನು ಕಲಬುರ್ಗಿಯಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಕೋರ್ಟ್ ಹೇಳಿದೆ. ಕಲಬುರ್ಗಿಗೆ ನಾನು 2ರಂದು ಹೋಗುತ್ತೇನೆ. ವಿಚಾರಣೆಗೆ ಒಳಪಡುತ್ತೇನೆ ಎಂದರು. ಯಾವುದೇ ಕಾರಣಕ್ಕೂ ಕಿರುಕುಳ ಕೊಡಬಾರದೆಂದು ಕೋರ್ಟ್ ತಿಳಿಸಿದೆ. ಪ್ರತಿಪಕ್ಷವನ್ನು ಸರಿಯಾಗಿ ನಡೆಸಿಕೊಳ್ಳಬೇಕೆಂದು ಕೋರ್ಟ್ ಸರಕಾರಕ್ಕೆ ಹೇಳಿದೆ ಎಂದು ತಿಳಿಸಿದರು.

ಕನ್ನಡ ಎಂಬುದು ತಮಿಳಿನಿಂದ ಹುಟ್ಟಿದ್ದು ಎಂದು ನಟ ಕಮಲಹಾಸನ್ ಅವರು ಹೇಳಿದ್ದು, ಅದು ಯಾವ ಪುಸ್ತಕದಲ್ಲಿದೆ ಎಂದು ಕೇಳಿದರು. ಕಮಲಹಾಸನ್ ಅವರು ಆ ಪುಸ್ತಕದ ಹೆಸರು ಹೇಳಬೇಕು. ಇದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಕಮಲಹಾಸನ್ ಬಗ್ಗೆ ರಾಜ್ಯದ ನಿಲುವೇನು ಎಂಬುದನ್ನು ರಾಜ್ಯ ಸರಕಾರವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇವತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ ಕನ್ನಡಪರ ಪ್ರತಿಭಟನಾಕಾರರ ಮೇಲೆ ಕಮಲಹಾಸನ್ ವಿರುದ್ಧ ಪ್ರತಿಭಟಿಸಿದ ಸಂದರ್ಭದಲ್ಲಿ ಎಫ್‍ಐಆರ್ ಮಾಡಿದ್ದಾರೆ. ಕಮಲಹಾಸನ್ ವಿರುದ್ಧ ಇರುವುದಾಗಿ ಹೇಳಿ, ಕನ್ನಡಪರ ಕಾರ್ಯಕರ್ತರ ಮೇಲೆ ಎಫ್‍ಐಆರ್ ಮಾಡುತ್ತೀರಿ. ನಿಮ್ಮ ನಿಲುವೇನು ಎಂದು ಕೇಳಿದರು. ಎಫ್‍ಐಆರ್ ಹಿಂಪಡೆಯುವಂತೆ ವಿನಂತಿಸುವುದಾಗಿ ತಿಳಿಸಿದರು.

ಸಕಲೇಶಪುರ, ತೀರ್ಥಹಳ್ಳಿ, ಸುಳ್ಯ, ಮಂಗಳೂರು, ಉಡುಪಿಯ ಕೆಲವು ಕಡೆ ಗುಡ್ಡ ಜರಿದಾಗ ಮನೆಗಳು ಮುಚ್ಚಿ ಹೋಗುವಂತಿವೆ. ಮಂಗಳೂರಿನಲ್ಲಿ ಇವತ್ತು 3 ಜನರು ಮೃತರಾಗಿದ್ದಾರೆ. ಗುಡ್ಡ ಪ್ರದೇಶದಲ್ಲಿ ಇರುವ ಮನೆಗಳನ್ನು ಸ್ಥಳಾಂತರ ಮಾಡುವ ಕುರಿತು ಸರಕಾರ ಗಮನಿಸಬೇಕು. ಅವರಿಗೆ ಅಗತ್ಯ ಅನುಕೂಲತೆಗಳನ್ನು ಕೊಟ್ಟು ಜನವಸತಿಗೆ ಅನುಕೂಲವಾದ ವಾತಾವರಣ ರೂಪಿಸುವಂತೆ ಮನವಿ ಮಾಡಿದರು.

Share This Article