ಬೆಂಗಳೂರು, ಜು.18: ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳ ವ್ಯಾಪ್ತಿಯಲ್ಲಿರುವ ಶೆಟ್ಟಿ ಹಳ್ಳಿ ಅರಣ್ಯದ ಗಡಿ ಪರಿಷ್ಕರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು, 1974ರಲ್ಲಿ ಶೆಟ್ಟಿಹಳ್ಳಿ ವನ್ಯ ಜೀವಿಧಾಮ ಎಂದು ಅಧಿಸೂಚನೆ ಮಾಡಿ, ಇದರ ವಿಸ್ತೀರ್ಣವನ್ನು 395.60 ಚ.ಕಿ.ಮೀ ಎಂದು ನಿಗದಿ ಮಾಡಲಾಗಿತ್ತು. ಮೂಲ ಅಧಿಸೂಚನೆಯ ವಿಸ್ತೀರ್ಣಕ್ಕೆ ಚ್ಯುತಿಯಾಗದಂತೆ ಶೆಟ್ಟಿಹಳ್ಳಿ ಅರಣ್ಯದ ಗಡಿಯನ್ನು 396.165 ಚದರ ಕಿಲೋಮೀಟರ್ ವಿಸ್ತೀರ್ಣ ಉಳಿಸಿಕೊಂಡು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಲು ಸಮ್ಮತಿಸಲಾಗಿದೆ ಎಂದು ತಿಳಿಸಿದರು.
1974ರ ನವೆಂಬರ್ ನಲ್ಲಿ ವನ್ಯಜೀವಿಧಾಮ ಎಂದು ಅಧಿಸೂಚನೆ ಆದಾಗ, ಅದರಲ್ಲಿ ರಸ್ತೆ, ಬಸ್ ನಿಲ್ದಾಣ, ಜನವಸತಿ ಪ್ರದೇಶ, ಪಟ್ಟಾಭೂಮಿ, ಶರಾವತಿ ಮುಳುಗಡೆ ಪುನರ್ವಸತಿಗಾಗಿ ಗುರುತಿಸಿರುವ ಪ್ರದೇಶ ಇತ್ಯಾದಿಯೂ ಸೇರ್ಪಡೆಯಾಗಿತ್ತು. ಜನರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಲು ಗಡಿ ಪರಿಷ್ಕರಣೆ ಮಾಡಲು ಇಲಾಖೆ ತೀರ್ಮಾನಿಸಿ, ಇದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯಲಾಗಿತ್ತು ಎಂದು ವಿವರಿಸಿದರು.