ನವ ಕರ್ನಾಟಕ, ನವಭಾರತ ನಿರ್ಮಾಣದಲ್ಲಿ ಮಠಗಳ ಪಾತ್ರ ಹಿರಿದು- ಈಶ್ವರ ಖಂಡ್ರೆ

YDL NEWS
2 Min Read

ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಶಕ್ತಿ ಮಠಗಳಿಗಿದೆ: ಈಶ್ವರ ಖಂಡ್ರೆ

 

 

ದಾವಣಗೆರೆ, ಜು.21: ಇಂದಿನ ಯುವಜನರು ಮದ್ಯ, ಮಾದಕದ್ರವ್ಯಗಳ ಚಟಕ್ಕೆ ಬಲಿಯಾಗುತ್ತಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಶಕ್ತಿ ಮಠಮಾನ್ಯಗಳಿಗೆ ಇದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆಯಲ್ಲಿಂದು ನಡೆದ ಪಂಚಾಚಾರ್ಯರು ಮತ್ತು ಶಿವಾಚಾರ್ಯರ ಶೃಂಗಸಭೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಮಠಾಧೀಶ್ವರರು ಯುವಜನರಿಗೆ ವ್ಯಸನಮುಕ್ತ ಬದುಕು ನಡೆಸುವಂತೆ ತಿಳಿಯಹೇಳಬೇಕು ಎಂದರು.

ವೀರಶೈವ ಮಠ ಮಾನ್ಯಗಳು ಜಾತಿ, ಧರ್ಮಗಳನ್ನು ಮೀರಿ, ಮುಸಲ್ಮಾನರೂ ಸೇರಿದಂತೆ ಎಲ್ಲ ಜಾತಿ ಜನಾಂಗದವರಿಗೆ ಅನ್ನ, ಆಶ್ರಯ, ಅರಿವೆಂಬ ದಾಸೋಹದ ಮೂಲಕ ಈ ಜಗತ್ತಿಗೆ ಜ್ಞಾನದ ಬೆಳಕು ನೀಡಿವೆ. ನವ ಕರ್ನಾಟಕದ ಮತ್ತು ತನ್ಮೂಲಕ ನವ ಭಾರತದ ನಿರ್ಮಾಣಕ್ಕೆ ದೊಡ್ಡ ಕೊಡುಗೆಯನ್ನು ನೀಡಿವೆ ಎಂದರು.

ಸರ್ವರಿಗೂ ಲೇಸನ್ನೇ ಬಯಸುವ ಸಮಾಜ ನಮ್ಮದು. ನಾವು ಕೇವಲ ಇತಿಹಾಸ ಹೇಳುತ್ತಾ ಹೆಮ್ಮೆಪಟ್ಟರೆ ಸಾಲದು. ಪ್ರಸಕ್ತ ಕಾಲಘಟ್ಟದಲ್ಲಿ ನಾವು ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಸಂಘಟನೆಯಲ್ಲಿ ಬಲವಿದೆ ಎಂಬುದನ್ನು ಅರಿಯಬೇಕು. ನಮ್ಮ ಸಂಘಟನಾಶಕ್ತಿ ಇಡೀ ಮಾನವ ಕುಲದ ಕಲ್ಯಾಣಕ್ಕೆ ಸಮರ್ಪಿತವಾಗಿರಬೇಕು ಎಂದರು.

ನಾವುಗಳು ಇಂದು ಸುಸಂಸ್ಕೃತರಾಗಿ, ವಿದ್ಯಾವಂತರಾಗಿ, ಬುದ್ಧಿವಂತರಾಗಿ, ಆರೋಗ್ಯವಂತರಾಗಿ ಇರುವುದಕ್ಕೆ ಮಠಗಳು ನೀಡುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೇವೆಯೂ ಕಾರಣ ಎಂದರು.

ಕೈಲಾಸವೇ ಧರೆಗಿಳಿದಂತೆ ಭಾಸವಾಗುತ್ತಿದೆ:

16 ವರ್ಷಗಳ ಬಳಿಕ ಪಂಚಪೀಠಾಧಿಪತಿಗಳು ಒಂದೇ ವೇದಿಕೆಯಲ್ಲಿ ಆಸೀನರಾಗಿದ್ದಾರೆ, ಜೊತೆಗೆ ವೇದಿಕೆಯ ಮೇಲೆ ಮತ್ತು ವೇದಿಕೆಯ ಕೆಳಗೆ ನೂರಾರು ಹರ, ಚರ, ಗುರು ಮೂರ್ತಿಗಳ ಸಮಾಗಮವಾಗಿದ್ದು, ಕೈಲಾಸವೇ ಧರೆಗಿಳಿದಂತೆ ಭಾಸವಾಗುತ್ತಿದೆ ಎಂದು ಈಶ್ವರ ಖಂಡ್ರೆ ಬಣ್ಣಿಸಿದರು.

ಎಲ್ಲ ಪಂಚಪೀಠಗಳ ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಲು ಶ್ರಮಿಸಿರುವ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ಅಣ್ಣನವರು ಮತ್ತು ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು.

ಜಾತಿ ಗಣತಿಯಲ್ಲಿ ವಾಸ್ತವ ಮಾಹಿತಿ ನೀಡಿ:

ಜಾತಿಗಣತಿಯ ವೇಳೆ ನಮ್ಮ ಸಮುದಾಯದವರು ಒಳಪಂಗಡಗಳ ಹೆಸರುಗಳನ್ನಷ್ಟೇ ಬರೆಸದೆ ವೀರಶೈವ ಲಿಂಗಾಯತ ಎಂದು ಬರೆಸಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಸಮಾನಾರ್ಥಕ ಪದಗಳೇ ಹೊರತು ಬೇರೆ ಬೇರೆಯಲ್ಲ. ನಾವೆಲ್ಲರೂ ಒಂದೇ ಎಂದು ಹೇಳಿದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸತ್ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Share This Article