ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ರೈತರಿಗೆ ಗೊಬ್ಬರದ ಕೊರತೆ ಮತ್ತು ರಾಜ್ಯ ಸರ್ಕಾರಕ್ಕೆ ಗೊಬ್ಬರ ಖರೀದಿ ಮಾಡಲು ಹಣಕಾಸಿನ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕಾಪು ದಾಸ್ತಾನು ಅಂದರೆ ಬಫರ್ ದಾಸ್ತಾನನ್ನು ಇಡಲು 1000 ಕೋಟಿ ರೂ. ಮೀಸಲಿಡುತ್ತಿದ್ದರು. ಸಿದ್ದರಾಮಯ್ಯ ಅವರು ರೈತರ ಗೊಬ್ಬರ ಬಫರ್ ದಾಸ್ತಾನನ್ನು ಇಡಲು ತೆಗೆದಿಟ್ಟಿರುವ ಹಣ ಕೇವಲ 400 ಕೋಟಿ ರೂ ಮಾತ್ರ. 1000 ಕೋಟಿ ಜಾಗದಲ್ಲಿ 400 ಕೋಟಿ ತೆಗೆದಿಟ್ಟರೆ ರೈತರಿಗೆ ಹೇಗೆ ಗೊಬ್ಬರ ಸಿಗುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಯುರಿಯಾ ಗೊಬ್ಬರವನ್ನು ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ಅದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆಕೊಟ್ಟಿದೆ ಎಂದರು.
ಉತ್ತರ -ದಕ್ಷಿಣ ಕರ್ನಾಟಕಗಳಲ್ಲಿ ರಾಗಿ, ಜೋಳ, ಮೆಕ್ಕೆಜೋಳ, ಹೆಸರು ಮುಂತಾದ ಬೆಳೆಗೆ ಗೊಬ್ಬರದ ಅವಶ್ಯಕತೆ ಇದೆ. ಆದರೆ ಯುರಿಯಾ ಗೊಬ್ಬರವನ್ನು ಸರಬರಾಜು ಮಾಡಲು ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಸಿರು ಗೊಬ್ಬರ ಬಹಳ ಕಡಿಮೆ. ಆ ಭಾಗದಲ್ಲಿ ಯುರಿಯಾ ಗೊಬ್ಬರವನ್ನೇ ಹೆಚ್ಚು ಉಪಯೋಗಿಸುತ್ತಾರೆ. ಅಲ್ಲಿನ ರೈತರಿಗೆ ಯುರಿಯಾ ಗೊಬ್ಬರ ಸಿಗದೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿರುವ ಕಾರಣ ರೈತರ ಬೆಳೆಗೆ ಶೀತವಾಗಿದೆ. ಬೆಳೆಗೆ ಗೊಬ್ಬರ ನೀಡಿದರೆ ಬೆಳೆ ಚೆನ್ನಾಗಿ ಬರುತ್ತದೆ ಇಲ್ಲವೆಂದರೆ ಬೆಳೆ ಬರುವುದಿಲ್ಲ ಎಂದು ರೈತರು ಮಾತನಾಡುತ್ತಿದ್ದಾರೆ. ರೈತರ ಗೋಳನ್ನು ಕೇಳುವವರು ಯಾರು ಇಲ್ಲ ಎಂದು ಆರೋಪಿಸಿದರು. ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದ ಗೊಬ್ಬರದ ಕೇಂದ್ರಗಳಲ್ಲಿ ಸಾವಿರಾರು ಸಂಖ್ಯೆಯ ರೈತರು ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೂಡಲೇ ಯುರಿಯಾ ಗೊಬ್ಬರ ಒದಗಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಯುರಿಯಾ ಗೊಬ್ಬರದ ಪರ್ಯಾಯವಾಗಿ ನ್ಯಾನೋ ಯುರಿಯಾ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರಚಾರ ಮಾಡಿಲ್ಲ. ಯುರಿಯಾ ಗೊಬ್ಬರ ಸಿಗದಿದ್ದಾಗ ನ್ಯಾನೋ ಯುರಿಯಾ ಬಳಕೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿತ್ತು; ಆದರೆ ಮಾಡಿಲ್ಲ್ಲ ಎಂದು ರವಿಕುಮಾರ್ ಅವರು ದೂರಿದರು.
ಕಾಂಗ್ರೆಸ್ ಸರ್ಕಾರ ನ್ಯಾನೋ ಯುರಿಯಾ ಸಿಂಪಡಣೆಗೆ ಬೇಕಾದ ಯಂತ್ರಗಳಿಗೆ ಸಹಾಯಧನಕ್ಕೆ ಅನುದಾನ ಕೊಡುತ್ತಿಲ್ಲ. ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಮಣ್ಣಿನಲ್ಲಿ ಸೇರಿಸುವ ಜೈವಿಕ ಗೊಬ್ಬರಗಳ ವಿತರಣೆಯನ್ನು ಕಡಿತಗೊಳಿಸಿದ್ದಾರೆ. ಹಸಿರೆಲೆ ಗೊಬ್ಬರ ಮಾಡಲು ರೈತರಿಗೆ ಸಹಾಯಧನ ನೀಡಿರುವುದಿಲ್ಲ. ಇದ್ಯಾವುದೇ ಕಾರ್ಯವನ್ನು ಮಾಡದೆ ರೈತರನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ನವರ ಸರ್ಕಾರ ಕಡೆಗಣಿಸಿದೆ ಎಂದು ಆಕ್ಷೇಪಿಸಿದರು.
ಒಂದೆಡೆ ಜಾನುವಾರುಗಳು ಕಡಿಮೆಯಾಗುತ್ತಿವೆ. ಜಾನುವಾರು ಕಳವು ಮಾಡುವವರಿಗೆ ಈ ಸರ್ಕಾರ ಸಹಾಯ ಮಾಡುತ್ತದೆಯೇ ವಿನಾ ಅವನ್ನು ಸಾಕುವುದಕ್ಕೆ ಯಾವ ನೆರವನ್ನೂ ನೀಡುತ್ತಿಲ್ಲ. ಹಾಲಿನ ಪ್ರೋತ್ಸಾಹಧನವನ್ನೂ ನೀಡುತ್ತಿಲ್ಲ. ಇದರಿಂದ ರೈತರಿಗೆ ಏಟಿನಮೇಲೆ ಏಟು ಬೀಳುತ್ತಿದೆ ಎಂದು ತಿಳಿಸಿದರು.
ರೈತರಿಗೆ ಗುಣಮಟ್ಟದ ರಸಗೊಬ್ಬರ ನೀಡುತ್ತಿಲ್ಲ. ಖಾಸಗಿ ಕಂಪನಿಗಳು ಕಳಪೆ ಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ರೈತರಿಗೆ ಉತ್ತಮ ಬೆಳೆ ಬರುತಿಲ್ಲ. ಪ್ರಸ್ತುತ ಮಳೆ ಚೆನ್ನಾಗಿ ಇರುವುದರಿಂದ ರೈತರಿಗೆ ಉತ್ತಮ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗದೇ ಇದ್ದಲ್ಲಿ ರೈತರಿಗೆ ಬಿತ್ತನೆ ಮಾಡುವ ಸಮಯ ಕಳೆದು ಹೋದರೆ ಬೆಳೆ ಬರುವುದಿಲ್ಲ. ಹಾಗಾಗಿ ರೈತರನ್ನು ಸಂಪೂರ್ಣವಾಗಿ ಈ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ 6,000 ರೂ ಮತ್ತು ರಾಜ್ಯ ಸರ್ಕಾರದಿಂದ 4000 ರೂ ಎರಡು ಸೇರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಒಟ್ಟು 10 ಸಾವಿರ ರೂಗಳನ್ನು ನೀಡುತ್ತಿದ್ದರು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ 4000 ರೂ ಸಹಾಯಧನ ನೀಡುವುದನ್ನು ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಿತ್ತನೆ ಬೀಜದ ಬೆಲೆಯನ್ನು ಪ್ರತಿ ಕ್ವಿಂಟಲಿಗೆ ಶೇ 20 ರಷ್ಟು ಹೆಚ್ಚಿಸಿದೆ. ಸರ್ಕಾರ ತನ್ನ ದಾರಿದ್ರ್ಯ ಮತ್ತು ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಎಲ್ಲ ಬೆಲೆ ಏರಿಕೆಯನ್ನು ಮಾಡಿದೆ ಎಂದು ಟೀಕಿಸಿದರು.
ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ಅನುದಾನದಲ್ಲಿ ನಯಾಪೈಸೆಯನ್ನು ರಾಜ್ಯದ ರೈತರಿಗೆ ಖರ್ಚು ಮಾಡಿಲ್ಲ. ರೈತರಿಗೆ ನೆರವಾಗಬೇಕು ಎಂದು ಹೇಳಿ ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ರೈತರಿಗೆ ಖರ್ಚು ಮಾಡದೆ ಬೇರೆ ಉದ್ದೇಶಕ್ಕೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ, ರೈತರ ಬೆನ್ನಿನ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.
ರೈತರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಧರ್ಮಪತ್ನಿ ಅವರು ತಮ್ಮ ಒಡವೆಗಳನ್ನು ಮುಂಬೈನ ಬ್ಯಾಂಕಿನಲ್ಲಿ ಅಡಮಾನವಿಟ್ಟು ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಮಂಡ್ಯ ರೈತರಿಗೆ, ಹಾಸನ ರೈತರಿಗೆ ಮತ್ತು ಬೆಂಗಳೂರು ನಗರದ ಜನರಿಗೆ ನೀರನ್ನು ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯನವರು ರೈತರಿಗಾಗಿ ಯಾವ ಅಣೆಕಟ್ಟನ್ನು ಕಟ್ಟಿದ್ದಾರೆ? ಯಾರಿಗೆ ನೀರನ್ನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಸರ್ಕಾರದ ಬೇಜವಾಬ್ದಾರಿ ಹೇಳಿಕೆ- ಸತೀಶ್ ಕಡತನಮಲೆ
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗ ಕರ್ನಾಟಕದ ರೈತರಿಗೆ ಯುರಿಯಾ ಕೊರತೆ ಬರುತ್ತದೆ. ಹಿಂದೆ ಸಿದ್ದರಾಮಯ್ಯ ನವರ ಸರ್ಕಾರವಿದ್ದಾಗ ವಿಠ್ಠಲ್ ಅರಬಾವಿ ಎಂಬ ರೈತ ಯುರಿಯಾ ಸಿಗುತ್ತಿಲ್ಲವೆಂದು ಬೆಳಗಾವಿ ಜಿಲ್ಲೆಯಲ್ಲಿ ಹೋರಾಟ ಮಾಡಿದ ಸಂದರ್ಭದಲ್ಲಿ ರೈತನ ಎದೆಗೆ ಗುಂಡನ್ನು ಹಾರಿಸಿದ್ದನ್ನು ನಾವು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ನವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಈ ವರ್ಷದ ಮುಂಗಾರಿನಲ್ಲಿ ಎಷ್ಟು ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜ, ಗೊಬ್ಬರ ಬೇಕಾಗುತ್ತದೆ ಎನ್ನುವುದು ಕೃಷಿ ಅಧಿಕಾರಿಗಳ ಜೊತೆ ಜಿಲ್ಲ್ಲಾವಾರು ಸಭೆ ನಡೆಸಿ ಅವಶ್ಯಕತೆ ತಿಳಿದುಕೊಳ್ಳಬೇಕಿತ್ತು. ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡುವ ದಾರಿ ರಾಜ್ಯಸರ್ಕಾರಕ್ಕೆ ಇರುತ್ತದೆ ಎಂದು ತಿಳಿಸಿದರು.
ಅವಶ್ಯಕ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಈಗಾಗಲೇ ಸರಬರಾಜು ಮಾಡಿದೆ. ಕೇಂದ್ರ ರಸಗೊಬ್ಬರ ನೀಡಿದ್ದರೂ ಜನರನ್ನು ದಿಕ್ಕುತಪ್ಪಿಸಲು ಮತ್ತು ರೈತರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಕೇಂದ್ರ ಅವಶ್ಯವಿರುವ ರಸಗೊಬ್ಬರ ನೀಡಿರುವುದಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ಸರ್ಕಾರ, ಮನೆಗೆ ಬೆಂಕಿ ಬಿದ್ದ ಮೇಲೆ ನೀರು ಹುಡುಕಿದ ಹಾಗೆ ರೈತರು ರಸಗೊಬ್ಬರಕ್ಕೆ ಹೊಡೆದಾಟ ಮಾಡಿಕೊಂಡಾಗ ರಸಗೊಬ್ಬರವನ್ನು ಹುಡುಕುವ ಕೆಲಸ ಮಾಡುತ್ತಿದೆ. ಇದರಿಂದ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಮುಂದಿನ ಚುನಾವಣೆಗಳಲ್ಲಿ ರೈತರ ಬಳಿ ಮತ್ತು ಜನರ ಬಳಿ ಮತ ಕೇಳಲು ಹೋದಾಗ ತಕ್ಕ ಉತ್ತರ ನೀಡಲು ರಾಜ್ಯದ ರೈತರು ಮತ್ತು ಜನರು ಕಾಯುತ್ತಿದ್ದಾರೆ. ಸ್ಥಳೀಯ ಚುನಾವಣೆ ಬಂದಾಗ ಯಾರನ್ನು ಎಲ್ಲಿಗೆ ಕಳುಹಿಸಬೇಕು ಎಂದು ರೈತರು ಮತ್ತು ಜನ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ರೈತರು ಎದೆಗುಂದುವ ಅಗತ್ಯವಿಲ್ಲ ನಿಮ್ಮ ಜೊತೆ ಬಿಜೆಪಿ ಇದೆ. ನಿಮ್ಮ ಮನೆಬಾಗಿಲಿಗೆ ಬಂದು ಸಹಾಯಹಸ್ತವನ್ನು ಚಾಚುತ್ತೇವೆ ಎಂದು ತಿಳಿಸಿದರು.
ಕಳಪೆ ಬಿತ್ತನೆ ಬೀಜದ ವಿತರಣೆ ವಿರುದ್ಧ ಕಳೆದ 3 ತಿಂಗಳಿಂದ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಿದ್ದೇವೆ. ಕಳಪೆ ಬಿತ್ತನೆ ಬೀಜ ನೀಡಿದ ಎಷ್ಟು ಕಂಪನಿಗಳ ಮೇಲೆ ಕ್ರಮಕೈಗೊಂಡಿದ್ದೀರಿ? ಎಷ್ಟು ಕಂಪನಿಗಳಿಗೆ ಕೃಷಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ ಎಂಬ ಕುರಿತು ಮತ್ತು ಎಷ್ಟು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂಬ ವಿಷಯದಲ್ಲಿ ಸಿದ್ದರಾಮಯ್ಯನವರು ಕೂಡಲೇ ಮಾಹಿತಿ ನೀಡÀಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿಗಳು ಮುಂದಿನ 2028 ರ ಚುನಾವಣೆಗೆ ಯಶವಂತಪುರ ವಿಧಾನ ಸಭೆ ಬಿಜೆಪಿ ಅಭ್ಯರ್ಥಿಯಾಗಿ ಎಂ. ರುದ್ರೇಶ್ ಅವರ ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ರುದ್ರೇಶ್ ಅವರು ನನ್ನ ಮೇಲಿನ ಪ್ರೀತಿಯಿಂದ ಅವರು ಆ ರೀತಿ ಹೇಳಿಕೆ ನೀಡಿದ್ದಾರೆ. ಎನ್‍ಡಿಎ ಜೊತೆಯಲ್ಲಿ ಇದ್ದೇವೆ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ತೀರ್ಮಾನಿಸುತ್ತಾರೆ. ನಾನು ಎಲ್ಲದಕ್ಕೂ ಬದ್ಧನಾಗಿದ್ದೇನೆ ಎಂದು ಉತ್ತರಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್, ಬೆಂಗಳೂರು ಉತ್ತರ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ ಮೂರ್ತಿ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷ ರುದ್ರಪ್ಪ ಉಪಸ್ಥಿತರಿದ್ದರು.