ಬೆಂಗಳೂರು: ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಮುಂಬೈ ಪೊಲೀಸರು ಮಾದಕವಸ್ತು ತಯಾರಿಕೆ ಪ್ರಕರಣವನ್ನು ಪತ್ತೆ ಮಾಡಿದ್ದು, ಈ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕÀ ಧೀರಜ್ ಮುನಿರಾಜು ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವು ಡ್ರಗ್ಸ್ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಘಟನೆ ವಿರುದ್ಧ ಬಿಜೆಪಿ ಯುವ ಮೋರ್ಚಾವು ಮೈಸೂರಿನಲ್ಲಿ ನಾಳೆ (ಜುಲೈ 30) ಪ್ರತಿಭಟನೆ ನಡೆಸಲಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸರಕಾರ, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇದರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಂಥ ಕೃತ್ಯಗಳಲ್ಲಿ ಬೇರೆ ಯಾರೂ ಭಾಗವಹಿಸದಂತೆ ನೋಡಿಕೊಳ್ಳಬೇಕಿದೆ. ಕೈ ಜೋಡಿಸಿದ ಅಧಿಕಾರಿ, ಕುಮ್ಮಕ್ಕು ಕೊಡುವ ರಾಜಕಾರಣಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಬಿಜೆಪಿ ಯುವ ಮೋರ್ಚಾವು ಬೆಂಗಳೂರಿನಲ್ಲೂ ಮುಂದಿನ ದಿನಗಳಲ್ಲಿ ಡ್ರಗ್ಸ್ ವಿರುದ್ಧ ಹೋರಾಟ ಮುಂದುವರೆಸಲಿದೆ ಎಂದು ಹೇಳಿದರು. ಮುಂದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಸರಕಾರವು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು, ಅಕ್ರಮ ಮಾದಕದ್ರವ್ಯ ಪೆಡ್ಲಿಂಗ್ ದುಡ್ಡಿನಿಂದ ಆಡಳಿತ ನಡೆಸುತ್ತಿದೆಯೇ ಎಂದು ಕೇಳಿದರು. ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆಯಲ್ಲಿ ಮಾದಕವಸ್ತು ಸರಬರಾಜುದಾರ ಇದ್ದರೆ, ಉತ್ಪಾದಕನು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಇರುವುದಾದರೆ, ಏನು ಪ್ರಶ್ನೆ ಕೇಳಬೇಕೆಂದು ಗೊಂದಲ ಉಂಟಾಗಿದೆ. ಇದು ಒಳ್ಳೆಯ ಸಂದೇಶವಲ್ಲ ಎಂದು ನುಡಿದರು.
ಮಾದಕವಸ್ತು ಜಾಲ ವಿಸ್ತರಣೆ ಮತ್ತು ಸರಕಾರದ ನಿಷ್ಕ್ರಿಯತೆಯನ್ನು ಬಿಜೆಪಿ ಯುವಮೋರ್ಚಾವು ತೀವ್ರವಾಗಿ ಖಂಡಿಸುತ್ತದೆ ಎಂದರು. ಮಾದಕವಸ್ತು ನಿಯಂತ್ರಣ ದಳವು ಸಕ್ರಿಯವಾಗಿ ಇದನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದಿನ ಪೀಳಿಗೆ ದುಶ್ಚಟಗಳಿಗೆ ಬಲಿ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 1300 ಕೋಟಿಗೂ ಹೆಚ್ಚು ಮಾದಕದ್ರವ್ಯ ವಶದ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದ ಪೊಲೀಸರು ಕಲಬುರ್ಗಿಯಲ್ಲಿ ಮಾದಕದ್ರವ್ಯ ವಶದ ಪ್ರಕರಣ ನಡೆಸಿದರೂ ರಾಜ್ಯ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೇ ಎಂದು ಕೇಳಿದರು.
ಕರ್ನಾಟಕದ ಪೊಲೀಸ್, ರಾಜ್ಯದ ಆಡಳಿತ ಯಾವ ಮಟ್ಟಕ್ಕೆ ಇವತ್ತು ಬಂದಿದೆ ಎಂದರೆ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನ ಬಳಿ ಮಹಾರಾಷ್ಟ್ರದ ಮಾದಕದ್ರವ್ಯ ನಿಷೇಧ ದಳವು ಫ್ಯಾಕ್ಟರಿಯೊಂದರ ಮೇಲೆ ದಾಳಿ ನಡೆಸಿದೆ. ಇದರ ಮುಂದೆ ಒಂದು ಕಾರು ಸರ್ವಿಸ್ ಸೆಂಟರ್ ಇತ್ತು. ಹಿಂಭಾಗದಲ್ಲಿ ಸಿಂಥೆಟಿಕ್ ಡ್ರಗ್ ಕಾರ್ಖಾನೆ ಇತ್ತು. ಮುಂಬೈನಿಂದ ಬಂದ ಮಹಾರಾಷ್ಟ್ರದ ಪೊಲೀಸರು ಈ ದಾಳಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2023ರಲ್ಲಿ ಮಂಗಳೂರಿನ ಬಂದರಿನಲ್ಲಿ ದಾಳಿ ಮತ್ತು ಮಾದಕದ್ರವ್ಯ ವಶದಿಂದ ಆರಂಭವಾಗಿದೆ. ಈಚೆಗೆ ಕಲಬುರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜುವನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇವರು ಯಾರಿಗೆ ಆತ್ಮೀಯರು ಎಂಬುದು ಬಿಡಿಸಿ ಹೇಳುವುದಿಲ್ಲ; ಅದು ರಾಜ್ಯದ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.
ಕಲಬುರ್ಗಿ ಜಿಲ್ಲೆಯಲ್ಲಿ ಈ ಡ್ರಗ್ ಪೆಡ್ಲಿಂಗ್ ಕೇಸ್ ನಡೆದಿತ್ತು. ಇದೀಗ ಮುಂಬೈನ ಪೊಲೀಸರು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರ ತವರು ಜಿಲ್ಲೆಯಲ್ಲಿ ಸರಬರಾಜಾಗುತ್ತಿದ್ದ ಮಾದಕದ್ರವ್ಯವನ್ನು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಉತ್ಪಾದಿಸುತ್ತಿದ್ದರೆಂಬ ಕಳಂಕ ನಮ್ಮ ರಾಜ್ಯಕ್ಕೆ ಬಂದಿದೆ ಎಂದರು.
ಪೊಲೀಸ್ ವ್ಯವಸ್ಥೆ, ಮಾದಕದ್ರವ್ಯ ತಡೆ ದಳ ಏನು ಮಾಡುತ್ತಿದೆ? 2024ರಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಪರಮೇಶ್ವರ್ ಅವರು ಒಂದು ಸಭೆ ಕರೆದಿದ್ದರು. ಮಾದಕವಸ್ತು ಮುಕ್ತ ರಾಜ್ಯಕ್ಕೆ ಒಂದು ಡ್ರಗ್ ಫ್ರೀ ಕರ್ನಾಟಕ ಎಂಬ ಆ್ಯಪ್ ಮಾಡಿದ್ದಾಗಿ ತಿಳಿಸಿದ್ದರು. ಇದುವರೆಗೂ ಆ್ಯಪ್ ನಿಂದ ಪ್ರಯೋಜನ ಆಗಿಲ್ಲ. ಕಾನೂನು- ಸುವ್ಯವಸ್ಥೆಯೂ ಹದಗೆಟ್ಟಿದೆ ಎಂದು ಟೀಕಿಸಿದರು.
ಮೈಸೂರಿನ ಕಮೀಷನರ್ ಅವರು ನರಸಿಂಹರಾಜ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ಅವರನ್ನು ಅಮಾನತು ಮಾಡಿದ್ದಾರೆ. ಪೊಲೀಸರಿಗೆ ಗೊತ್ತಿಲ್ಲದೆ ಇದು ನಡೆಯಲು ಸಾಧ್ಯವೇ? ರಾಜ್ಯದ ಬೇಹುಗಾರಿಕಾ ದಳವು ಮುಖ್ಯಮಂತ್ರಿಗಳ ಕೈಯಲ್ಲಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಇದ್ದರೆ ಈ ರಾಜ್ಯದ ಯುವಜನತೆ ಮೇಲಿನ ಮಾದಕÀದ್ರವ್ಯದ ಹಾವಳಿ ಎಷ್ಟಿದ್ದೀತು ಎಂದು ಕೇಳಿದರು.
ಮಾದಕವಸ್ತು ಸಾಗಣೆ ಮತ್ತು ಸೇವನೆಯಿಂದ ಪುಂಡು ಪೋಕರಿಗಳ ಹಾವಳಿ ಹೆಚ್ಚಾಗುತ್ತಿದೆ. ಇಲ್ಲೇ ಡ್ರಗ್ಸ್ ಉತ್ಪಾದನೆಯೂ ನಡೆಯುತ್ತಿರುವುದು ವಿಷಾದಕರ ಎಂದು ಆಕ್ಷೇಪಿಸಿದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್, ಯುವ ಮೋರ್ಚಾ ಬೆಂಗಳೂರು ಕೇಂದ್ರ ಜಿಲ್ಲೆ ನಿಕಟಪೂರ್ವ ಅಧ್ಯಕ್ಷ ಅಭಿಲಾμï ರೆಡ್ಡಿ ಉಪಸ್ಥಿತರಿದ್ದರು.