*ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗೋಣ : ವಿಜಯಾನಂದ ಕಾಶಪ್ಪನವರ್ ಕರೆ*

YDL NEWS
3 Min Read

ಬೆಂಗಳೂರು, ಆಗಸ್ಟ್ 01:

 

ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಿಂದಲೇ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಇದರಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದು ಎಂದು ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

 

ಇಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಬೆಂಗಳೂರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯಕ್ತ ಆಶ್ರಯದಲ್ಲಿ ಚಿತ್ತರಗಿ ಇಳಕಲ್ ಶ್ರೀ ವಿಜಯಮಹಂತೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಶ್ರೀ ಮ.ನಿ.ಪ್ರ ಡಾ. ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ “ವ್ಯಸನ ಮುಕ್ತ ದಿನಾಚರಣೆ” ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಲಕ್ಷಾಂತರ ಮಂದಿ ಮದ್ಯವ್ಯಸನಿಗಳನ್ನು ಚಟಮುಕ್ತರನ್ನಾಗಿಸಿ, ಹೊಸ ಜೀವನಕ್ಕೆ ಪರಿವರ್ತಿಸಿದ ಪೂಜ್ಯ ಶ್ರೀ ಶ್ರೀ ಶ್ರೀ ಮ.ನಿ.ಪ್ರ ಡಾ. ಮಹಾಂತ ಶಿವಯೋಗಿಗಳ ಸಾಧನೆಯನ್ನು ಜನ ಮಾನಸದಲ್ಲಿ ಸದಾ ಹಸಿರಾಗಿಸಲು ರಾಜ್ಯ ಸರ್ಕಾರವು ಅವರ ಜನ್ಮ ದಿನವಾದ ಆಗಸ್ಟ್ 01 ನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿದೆ ಎಂದರು.

 

ನಮ್ಮ ಕ್ಷೇತ್ರದ ಅನೇಕ ಕುಂಟುಂಬಗಳಿಗೆ ಸ್ವಾಮೀಜಿಯವರು ದಾರಿ ದೀಪವಾಗಿದ್ದಾರೆ. “ಜೋಳಿಗೆ ಸ್ವಾಮಿ” ಎಂದೇ ನಾಡಿನಾದ್ಯಂತ ಖ್ಯಾತರಾದ ಇಳಕಲ್ ಮಹಾಂತೇಶ ಸ್ವಾಮೀಜಿ ಅವರದು ವಿಶಿಷ್ಟವಾದ ಕೈಂಕರ್ಯ. ಅಕ್ಷರ ದಾಸೋಹ, ಅನ್ನದಾಸೋಹ ಕಾರ್ಯಗಳ ಜೊತೆಗೆ ಜನಸಾಮಾನ್ಯರನ್ನು ಚಟ ಮುಕ್ತರನ್ನಾಗಿಸಲು ಮಹಾಂತೇಶ ಸ್ವಾಮಿಗಳು ಅನುಸರಿಸುತ್ತಿದ್ದ ವಿಧಾನ ಅಪರೂಪ ಎನಿಸುವಂತಹದ್ದು. ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದ ಸ್ವಾಮೀಜಿ ಅವರು ಜಾÐನ ಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸುತ್ತಾ ಗ್ರಾಮೀಣರ ಮುಂದೆ ವಿಶೇಷ ಮನವಿ ಮಾಡುತ್ತಿದ್ದರು. “ನೀವು ನನಗಾಗಲಿ ನಮ್ಮ ಮಠಕ್ಕಾಗಲಿ ಏನನ್ನು ಕೊಡಬೇಡಿ, ನಿಮ್ಮ ದುಷ್ಟ ವ್ಯಸನಗಳನ್ನು ನನ್ನ ಜೋಳಿಗೆ ತುಂಬಿಸಿ ಎಂದು ತಾವು ಬಗಲಿನಲ್ಲಿ ನೇತುಹಾಕಿಕೊಂಡಿದ್ದ ಜೋಳಿಗೆಯನ್ನು ಭಕ್ತರ ಮುಂದೆ ಚಾಚುತ್ತಿದ್ದರು ಎಂದರು.

 

ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತರಬೇಕು. ಇತ್ತೀಚೆಗೆ ವ್ಯಸನಗಳ ಜೊತೆಗೆ ಜಾತೀಯತೆ ಮತ್ತು ಧರ್ಮ ಧರ್ಮದ ನಡುವೆ ಉಂಟಾಗುತ್ತಿರುವ ಕಂದಾಚಾರಗಳಿಂದ ಉಂಟಾಗುತ್ತಿರುವ ಬದಲಾವಣೆಗಳ ಕಡೆಗೆÀ ಸಾಹಿತಿಗಳು, ಚಿಂತಕರು ಗಮನ ಹರಿಸದರೆ ಮಾತ್ರ ಕುವೆಂಪು ಬಯಸಿದಂತೆ ಸರ್ವ ಜನಾಂಗೀಯ ತೋಟ ಆಗಲು ಸಾಧ್ಯ ಎಂದರು.

 

ವ್ಯಸನಮುಕ್ತ ಸಮಾಜ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಮನೋವಿಜ್ಞಾನಿ ಡಾ.ಎ.ಶ್ರೀಧರ್ ಅವರು, ಮಾನಸಿಕ ಸ್ಥಿತಿಗತಿಗಳು ನಮ್ಮಲ್ಲಿ ಶಕ್ತಿಯನ್ನು ತುಂಬಿಸುತ್ತದೆ. ವ್ಯಸನಗಳು ಮಾನಸಿಕ ಸ್ಥಿತಿಯನ್ನು ಅಲ್ಲೋಲ-ಕಲ್ಲೋಲ ಮಾಡುವ ಜೊತೆಗೆ, ದೇಹದ, ಮನಸ್ಸಿನ ಸಮತೋಲನ ಕಳೆದುಕೊಳ್ಳುವಂತಾಗುತ್ತದೆ ಇದರಿಂದ ನಾವು ಏನು ಮಾಡುತ್ತಿದ್ದೇವೆ ಎಂಬುದೇ ನಮಗೆ ಗಮನಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳು ಯಾರ ಪ್ರಚೋದನೆಗೂ ಒಳಗಾಗಬಾರದು. ಅಮಲೇರಿಸುವ ಪದಾರ್ಥಗಳು ಮಾನಸಿಕ ಶಕ್ತಿಯನ್ನು ಕುಂದಿಸುವುದರಿಂದ, ಸಮಾಜಕ್ಕೆ ಮಾರಕವಾಗುತ್ತದೆ. ಯಾವುದೇ ಪ್ರೇರಣೆಯಿಂದ ವ್ಯಸನ ಕ್ಕೊಳಗಾಗುವುದರಿಂದ ಸಿಗುವ ಅಲ್ಪಾವಧಿ ಸುಖ ಮಾನಸಿಕ ಖಿನ್ನತೆಗೆ ದೂಡುತ್ತದೆ ಎಂದರು.

 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಇಳಕಲ್ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ. ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ಆಶೀರ್ವದಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಡಾ. ಮಹಾಂತ ಶಿವಯೋಗಿಗಳ ರೀತಿಯಲ್ಲಿ ವ್ಯಸನಕ್ಕೆ ದಾಸರಾಗಿರುವವರಿಗೆ ಅರಿವು ಮೂಡಿಸಬೇಕು ಎಂದರು.

 

ಕಾರ್ಯಕ್ರಮದಲ್ಲಿ ಕರ್ನಾಟಕ ಮಾದ್ಯಮ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಆಯೇಷಾ ಖಾನ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎನ್.ಎಸ್.ಮಹೇಶ್, ಗಾಂಧಿ ಸ್ಮಾರಕ ನಿಧಿಯ ಕೋಶಾಧಿಕಾರಿ ಹೆಚ್.ಬಿ.ದಿನೇಶ್, ಗಾಂಧೀ ಭವನದ ಕಾರ್ಯದರ್ಶಿ ಎಂ.ಸಿ.ನರೇಶ್, ಗಾಂಧೀ ಭವನದ ಸದಸ್ಯರಾದ ಅಬಿದಾ ಬೇಗಂ ಇತರ ಗಣ್ಯರು ಉಪಸ್ಥಿತರಿದ್ದರು.

Share This Article