ಬೆಂಗಳೂರು: ಇದೇ 16ರೊಳಗೆ ಒಳ ಮೀಸಲಾತಿ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ 16ರ ನಂತರ ಅಸಹಕಾರ ಚಳವಳಿ ಮೂಲಕ ಈ ಸರಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.
ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲಿನÀಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ವರದಿಯ ಅನುμÁ್ಠನದ ಸಂಬಂಧ ಕಾರ್ಯಾಗಾರ ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎ.ನಾರಾಯಣಸ್ವಾಮಿ ಅವರು, ವರದಿಗಳ ಒಟ್ಟಾರೆ ಸಾರಾಂಶವನ್ನು ನೋಡಿದರೆ ಶೇ 6 ಬದಲಾಗಿ 7, 8 ಶೇಕಡಾ ಮೀಸಲಾತಿ ಕೊಡಬೇಕು; ಕೇವಲ ಮೀಸಲಾತಿ ನೀಡುವುದಲ್ಲ. ವಿಶೇಷವಾದ ಯೋಜನೆಗಳನ್ನು ಸರಕಾರವು ಘೋಷಿಸಬೇಕು ಎಂದು ಆಗ್ರಹಿಸಿದರು.
ಸಿಇಟಿಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾದಿಗರು ಉತ್ತೀರ್ಣರಾಗಿದ್ದಾರೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪ್ರಮಾಣವು 2,500 ಇದ್ದರೆ, ನಾವು ಕೇವಲ 600 ಜನರು ದಾಖಲಾಗಿದ್ದೇವೆ. ಇದು ನಮ್ಮ ಶೈಕ್ಷಣಿಕ ಸ್ಥಿತಿಗತಿಯನ್ನು ತೋರಿಸುತ್ತದೆ ಎಂದು ವಿವರಿಸಿದರು.
ಜನಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ಶಿಫಾರಸು ಮಾಡಿದ್ದಾರೆ. ಆ ಜನಸಂಖ್ಯೆಯಲ್ಲೂ 36.69 ಲಕ್ಷ ಜನ ನಾವಿದ್ದೇವೆ. ಇನ್ನೊಂದು ಸಮುದಾಯ ಸೇರಿದರೆ 41 ಲಕ್ಷ ಮಾದಿಗರು ಇದ್ದಾರೆ ಎಂಬುದನ್ನು ಮರೆಯಬಾರದು ಎಂದು ಪ್ರಶ್ನೆಗೆ ಉತ್ತರಿಸಿದರು. ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ಕೊಡಬೇಕೆಂದು ಸುಪ್ರೀಂ ಕೋರ್ಟಿನ ತೀರ್ಪು ತಿಳಿಸಿದೆ ಎಂದರು.
ಮಾದಿಗರಿಗೆ ಹಾಸ್ಟೆಲ್ ಸೇರ್ಪಡೆಯ ಮಾನಸಿಕತೆ ಇಲ್ಲ; ಶೈಕ್ಷಣಿಕ ಪ್ರಗತಿಯೂ ಆಗಿಲ್ಲ. ಮುಖ್ಯವಾಹಿನಿಗೆ ಅವರು ಸೇರಿಲ್ಲವೆಂದಾದರೆ, ಸಾಮಾಜಿಕ ನ್ಯಾಯ ಕೊಡಬೇಕಾದ ರಾಜ್ಯದ ರಾಜಕಾರಣಿಗಳು, ಶಾಸಕರು, ಸಚಿವರು ಸದನದಲ್ಲಿ ಮಾತನಾಡಬೇಕಿದೆ ಎಂದು ಆಗ್ರಹಿಸಿದರು. ಸಾಮಾಜಿಕ ಸುಧಾರಣೆಯ ಉದ್ದೇಶದಿಂದ ಆಯ್ಕೆಯಾದ ಶಾಸಕರು ಸದನದಲ್ಲಿ ಸಾಮಾಜಿಕ ನ್ಯಾಯದ ವಿಷಯವನ್ನು ಇಟ್ಟುಕೊಂಡು ಮಾತನಾಡದೇ ಇದ್ದಲ್ಲಿ ಅವರ ವಿಧಾನಸಭೆ ಪ್ರವೇಶ ಯಾರಿಗೋಸ್ಕರ ಎಂದು ಪ್ರಶ್ನಿಸಿದರು.
ಮಂತ್ರಿಮಂಡಲಕ್ಕೆ ಸಾಮಾಜಿಕ ನ್ಯಾಯದ ಬದ್ಧತೆ ಇದ್ದರೆ, 16ರಂದು ಒಳ ಮೀಸಲಾತಿ ಕುರಿತು ಪ್ರಕಟಿಸಬೇಕು. ಇಲ್ಲವಾದರೆ ಮತ್ತೆ ಸಭೆ ನಡೆಸುವುದಿಲ್ಲ ಎಂದು ತಿಳಿಸಿದರು.