ಬೆಂಗಳೂರು: ಮಾಧ್ಯಮಗಳು ಕೆಲವೊಮ್ಮೆ ಟಿಆರ್ಪಿಗಾಗಿ (TRP) ಜನರ ಜೀವವನ್ನೇ ನಾಶ ಮಾಡುವ ಹಂತಕ್ಕೆ ಹೋಗುತ್ತೀರಿ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ಬೇಸರ ವ್ಯಕ್ತಪಡಿಸಿದೆ. ಮಾಧ್ಯಮಗಳು ತಮ್ಮ ವರದಿಯಲ್ಲಿ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಹೈಕೋರ್ಟ್ ಒತ್ತಿ ಹೇಳಿದೆ
ಇಂಧನ ಸಚಿವ ಕೆಜೆ ಜಾರ್ಜ್ (KJ George) ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ರದ್ದು ಕೋರಿ ಕನ್ನಡಪ್ರಭ (Kannada Prabha) ದಿನಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂಐ ಅರುಣ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಮೂರ್ತಿಗಳು ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲ ಕಾಲ ವಾದ ಆಲಿಸಿದ ಪೀಠ, ನಂತರ ಮಾತನಾಡಿ, ಮಾಧ್ಯಮದವರಿಗೆ ನಿಮ್ಮದೇ ಜವಾಬ್ದಾರಿಗಳಿರುತ್ತವೆ. ನೀವು ಜನರ ಅಭಿಪ್ರಾಯ ಸಂಗ್ರಹಿಸುತ್ತೀರಿ, ನೀವು ರಾಷ್ಟ್ರಗಳನ್ನು ನಿರ್ಮಾಣ ಮಾಡಬಹುದು. ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು. ಟಿಆರ್ಪಿ ಗಳಿಸುವ ಧಾವಂತದಲ್ಲಿ ಮಾಧ್ಯಮಗಳು ಕೆಲವೊಮ್ಮೆ ವ್ಯಕ್ತಿಗಳ ಜೀವನವನ್ನೇ ನಾಶಪಡಿಸುವುದನ್ನು ನಾವು ನೋಡುತ್ತಿದ್ದೇವೆ. ಪತ್ರಿಕಾಗೋಷ್ಠಿ ನಡೆಸಿದ್ದವರು ಹೇಳಿದ್ದನ್ನು ನೀವು ವರದಿ ಮಾಡಬಹುದು. ಆದರೆ ಅವರು ಹೇಳಿದ್ದೇ ಸತ್ಯ ಎಂದು ಬಣ್ಣ ಹಚ್ಚಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಎಸ್ ಸುದರ್ಶನ್, ಕರ್ನಾಟಕ ರಾಷ್ಟ್ರ ಸಮಿತಿ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿವಾದಿ ಕೆಜೆ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಸಂಬಂಧ ಪತ್ರಿಕಾಗೋಷ್ಠಿಯನ್ನೂ ಸಹ ನಡೆಸಲಾಗಿತ್ತು. ಆ ಪತ್ರಿಕಾ ಪ್ರಕಟಣೆಗೆ ಅನುಗುಣವಾಗಿಯೇ ಎಲ್ಲ ಲೇಖನಗಳನ್ನು ವರದಿ ಮಾಡಲಾಗಿದೆ. ಅರ್ಜಿದಾರರು ಪ್ರತಿವಾದಿಯ ಮಾನನಷ್ಟ ಉಂಟು ಮಾಡುವಂತಹ ಯಾವುದೇ ವಿಷಯವನ್ನು ಉದ್ದೇಶಪೂರ್ವಕವಾಗಿ ವರದಿ ಮಾಡಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ವಾದಿಸಿದ ಕೆಜೆ ಜಾರ್ಜ್ ಪರ ಹಿರಿಯ ವಕೀಲ ಕೆಎನ್ ಫಣೀಂದ್ರ, ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲ ವರದಿಗಳನ್ನು ಗಮನದಲ್ಲಿಟ್ಟುಕೊಂಡೇ ವಿಚಾರಣಾ ನ್ಯಾಯಾಲಯ ಅರ್ಜಿದಾರರ ವಿರುದ್ಧ ಸಂಜ್ಞೇ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ, ವಿಚಾರಣಾ ನ್ಯಾಯಾಲಯದಲ್ಲಿ ಇತರ ಆರೋಪಿಗಳ ವಿರುದ್ಧದ ವಿಚಾರಣೆಯೂ ನಡೆಯದಂತಾಗಿದೆ ಎಂದು ತಿಳಿಸಿದರು.
ಈ ವೇಳೆ ಪೀಠ ಪ್ರತಿಕ್ರಿಯಿಸಿ, ಮಾಧ್ಯಮದವರು ಬಹಳ ಶಕ್ತಿಶಾಲಿಗಳು. ಅವುಗಳಿಗೆ ಕಟ್ಟುವ, ಕೆಡವುವ ಸಾಮರ್ಥ್ಯವಿದ್ದು, ಈ ವೇಳೆ ಯಾರಿಗೂ ನೋವುಂಟಾಗಬಹುದು. ಆದ್ದರಿಂದ, ಮಾಧ್ಯಮಗಳು ಸಾಧ್ಯವಾದಷ್ಟೂ ಜಾಗರೂಕವಾಗಿರಬೇಕು. ಒಂದು ಗಾಳಿಸುದ್ದಿ ಹೇಳಿಕೆ ಗಾಳಿಸುದ್ದಿಯಂತೆಯೇ ಇರಬೇಕೇ ಹೊರತು ಅದೇ ಸತ್ಯ ಎಂದು ಪ್ರತಿಪಾದಿಸಬಾರದು. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿತು.
ಒಂದು ವೇಳೆ ಅರ್ಜಿದಾರರು ಕ್ಷಮೆ ಯಾಚಿಸಿದರೆ ಪ್ರಕರಣವನ್ನು ರದ್ದುಪಡಿಸಲಾಗುವುದು. ನಿಮಗೆ ಹೆಚ್ಚಿನ ಜವಾಬ್ದಾರಿಗಳಿವೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಕ್ಷಮೆಯಾಚನೆಯೊಂದಿಗೆ ಬಂದರೆ, ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು. ವರದಿಯಲ್ಲಿರುವ ಹೇಳಿಕೆ ನಿಮ್ಮದಲ್ಲ, ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದನ್ನು ಮಾತ್ರ ಪ್ರಕಟಿಸಿದ್ದೇವೆ ಎಂದು ನೀವು ಸ್ಪಷ್ಟನೆ ನೀಡುತ್ತಿದ್ದೀರಿ ಎಂದರೆ, ಆ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದರ್ಥ. ನಿಮ್ಮ ಹೇಳಿಕೆಗಳು ಯಾರನ್ನಾದರೂ ನೋಯಿಸಿದ್ದರೆ ಅಥವಾ ಬೇರೆ ಅರ್ಥ ಕಲ್ಪಿಸಿದ್ದರೆ ನೀವು ಅದಕ್ಕೆ ಕ್ಷಮೆ ಯಾಚಿಸಬೇಕು ಎಂದು ಮೌಖಿಕವಾಗಿ ಹೇಳಿತು.