ಸುರಪುರ : ಸುರಪುರ ತಾಲ್ಲೂಕಿನ ಕೆ. ತಳ್ಳಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗುತ್ತಿದ್ದು ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಗ್ರಾಮಸ್ಥರು ಗುತ್ತಿಗೆದಾರ ಬಿ.ಎಮ್. ಅಳ್ಳಿಕೋಟಿ ಗೆ ಈ ಕಾಮಗಾರಿ ಟೆಂಡರ್ ಆಗಿದ್ದು ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡುತ್ತಿದ್ದು ಇವರಿಗೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ತರಾತುರಿಯಲ್ಲಿ ಶಾಲಾ ಕೋಣೆ ಅರ್ಧಂಭರ್ದ ಕಾಮಗಾರಿ ಮಾಡಿ ಹೋದ ಮೇಲೆ ಮಕ್ಕಳ ಜೀವಕ್ಕೆ ಅಪಾಯವಿದೆ, ಕಟ್ಟಡ ತಳಪಾಯ ಅವಧಿಯಲ್ಲಿಯೇ ಕಳಪೆ ಗುಣಮಟ್ಟದಿಂದ ಕೂಡಿದ್ದು ಬರಿ ಒಣ ಜಲ್ಲಿಕಲ್ಲುಗಳನ್ನು ಬಳಸಲಾಗಿದೆ, ತಳಪಾಯಕ್ಕೆ ಚರಂಡಿಯಲ್ಲಿನ ಹೂಳು ತುಂಬಲಾಗಿದೆ. ಇದರಿಂದಾಗಿ ಮಕ್ಕಳು ಮತ್ತು ಶಿಕ್ಷಕರು ದಿನನಿತ್ಯ ಮೂಗು ಮುಚ್ಚಿಕೊಂಡು ಪಾಠ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ,
ಈ ಕಟ್ಟಡದಿಂದ ಮುಂದೆ ಮಕ್ಕಳ ಜೀವಕ್ಕೆ ಕಂಟಕವಾಗಲಿದ್ದು ಕೂಡಲೇ ಸಂಭಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಇದನ್ನು ತೆರವುಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸಬೇಕು , ಇಲ್ಲದಿದ್ದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಕಟ್ಟಡವನ್ನು ಒಡೆದು ಹಾಕಿ ಸಂಭಂದಿಸಿದ ಇಲಾಖೆಯ ಮುಂದೆ ಶಾಲಾ ಮಕ್ಕಳ ಜೊತೆಗೆ ಪಾಲಕರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.