ಬೆಂಗಳೂರು: ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ. ರೇವಣ್ಣ ಅವರ ಪತ್ನಿ ವತ್ಸಲ ರೇವಣ್ಣ (76) ಅವರು ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ಪತಿ ಹಾಗೂ ಇಬ್ಬರು ಪುತ್ರರಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವತ್ಸಲ ಅವರಿಗೆ ಮಾಗಡಿಯ ಎನ್.ಇ.ಎಸ್. ಬಡಾವಣೆಯಲ್ಲಿರುವ ತೋಟದ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಂಜೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ವತ್ಸಲ ರೇವಣ್ಣ ಅವರು ಮಾಗಡಿಯಲ್ಲಿ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ದೈವ ಭಕ್ತರಾಗಿದ್ದ ಅವರು ಮಾಗಡಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷ ಕುಟುಂಬದೊಂದಿಗೆ ಬಂದು ವಿಶೇಷ ಪೂಜೆ ನೆರವೇರಿಸುತ್ತಿದ್ದರು. ತಾಲ್ಲೂಕಿನ ಹಲವು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದ್ದರು.