ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಿಹಾಳ ಗ್ರಾಮದ ಐತಿಹಾಸಿಕ ದೇವಸ್ಥಾನ ಶ್ರೀ ಬಲಭೀಮೇಶ್ವರ ದೇಗುಲಮೂಲಭೂತ ಸೌಕರ್ಯ ಕೊರತೆ ಇದ್ದು,ದೇವಸ್ಥಾನ ಅಭಿವೃದ್ಧಿ ಮಾಡಬೇಕು ಎಂದು ಕರವೇ ತಾಲ್ಲೂಕು ಘಟಕ ವತಿಯಿಂದ ಶನಿವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಸಾಕಷ್ಟು ಹಣವಿದ್ದು, ಈ ಕೂಡಲೇ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ ಸುರಪುರ ವತಿಯಿಂದ ಒತ್ತಾಯಿಸಲಾಯಿತು.
ಗ್ರಾಮದಲ್ಲಿ ಶ್ರೀ ಬಲಭೀಮೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಸುಮಾರು 50 ಎಕರೆ ಜಮೀನು ಇದ್ದು,ಇದರಿಂದ ದೇವಸ್ಥಾನಕ್ಕೆ ಒಳ್ಳೆಯ ಆದಾಯ ಕೂಡ ಬರುತ್ತದೆ. ಆದರೂ ದೇವಸ್ಥಾನ ಸುತ್ತಮುತ್ತಲೂ ಸ್ವಚ್ಚತೆ ಇರುವುದಿಲ್ಲ. ದೇವಸ್ಥಾನಕ್ಕೆ ಕಾಪೌಂಡ್ ಇಲ್ಲ.ದೇಗುಲಕ್ಕೆ ಅರ್ಧ ಬಣ್ಣ ಹಚ್ಚಿದ್ದಾರೆ ಎಂದು ಕರವೇ ಸಂಘಟನೆ ಆರೋಪಿಸಿದರು.
ಇನ್ನೂ ದೇವಸ್ಥಾನದೊಳಗೆ ಕೆಲವು ಕಿಡಿಗೇಡಿಗಳು ಇಸ್ಪೀಟ್, ಮಟಕಾ ಮತ್ತು ಮದ್ಯಪಾನ ಸೇವಿಸುವುದು ಮಾಡುತ್ತಿದ್ದು,ಇದರಿಂದ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು, ಭಕ್ತಾದಿಗಳು ದೇವಸ್ಥಾನದ ದರ್ಶನಕ್ಕೆ ಬರಬೇಕಾದರೆ ತುಂಬಾ ಭಯಭೀತರಾಗಿದ್ದಾರೆ ಎಂದರು.
ಇಂಥ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವದಕ್ಕೆ ಸಿ.ಸಿ.ಕ್ಯಾಮರಾ ಅಳವಡಿಸಿ. ಈ ಗ್ರಾಮಕ್ಕೆ ಬರುವ ಬೀಟ್ ಪೊಲೀಸ್ರಿಗೆ ನಿರ್ದೇಶನ ನೀಡಿ ದೇವಸ್ಥಾನದೊಳಗಡೆ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ನಿಗಾ ವಹಿಸಲು ಸೂಚಿಸಬೇಕು ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷರು ವೆಂಕಟೇಶ ಬೈರಿಮಡ್ಡಿ, ಹಣಮಗೌಡ ಶಖಾಪೂರ, ಶ್ರೀನಿವಾಸ ನಾಯಕ ಲಕ್ಷ್ಮೀ ಪುರ, ಮಂಗಿಹಾಳ ಗ್ರಾಮ ಶಾಖೆಯ ಅಧ್ಯಕ್ಷರಾದ ಪ್ರಭು ಮಡಿವಾಳರ, ಹಾಗೂ ದೇವು ಹಾಲಗೇರಿ ಸೇರಿದಂತೆ ಇತರರು ಇದ್ದರು.